ಹಣ ಬಿಡುಗಡೆ ಆಗುವವರೆಗೆ ವಿಬಿಜಿ ರಾಮ್ ಜಿ ಯೋಜನೆಗೆ ಸಾಮಗ್ರಿ ಪೂರೈಕೆ ಇಲ್ಲ: ಸಾಮಗ್ರಿ ಸರಬರಾಜುದಾರರು
ನರೇಗಾ ಯೋಜನೆಯಡಿ ಸರಬರಾಜು ಮಾಡಿರುವ ಸಾಮಗ್ರಿಗಳ ೧೦೭ ಕೋಟಿಗೂ ಅಧಿಕ ಮೊತ್ತದ ಬಿಲ್‌ಗಳು ಕಳೆದ ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದು, ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ನೋಂದಾಯಿತ ಸಾಮಗ್ರಿ ಸರಬರಾಜುದಾರರು ಒತ್ತಾಯಿಸಿದರು.
ಈ ಕುರಿತು ಜಿಪಂ ಅಧಿಕಾರಿಗಳ ಮೂಲಕ ಸಿಇಒಗೆ ಮನವಿ ಸಲ್ಲಿಸಿದ ಅವರು, ಬಾಕಿ ಹಣ ಪಾವತಿಸುವವರೆಗೆ ಹೊಸದಾಗಿ ಜಾರಿಯಾಗಿರುವ ‘ವಿಬಿಜಿ ರಾಮ್‌ಜಿ’ ಯೋಜನೆಯಡಿ ಸಾಮಗ್ರಿ ಪೂರೈಸುವುದಿಲ್ಲ ಸಮಸ್ಯೆ ಬಗೆಹರಿಯದಿದ್ದರೆ ಜಿ.ಪಂ. ಕಚೇರಿ ಎದುರು ೫೦೦ರಿಂದ ೧,೦೦೦ ಮಂದಿ ಸೇರಿ ಅಹೋರಾತ್ರಿ ಧರಣಿ ನಡೆಸಲಾಗುವುದು. ಬಳಿಕ ರಾಜ್ಯಮಟ್ಟದಲ್ಲೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಸಾಮಗ್ರಿ ಸರಬರಾಜುದಾರರ ಸಂಘದ ಅಧ್ಯಕ್ಷ ಮದನಹಳ್ಳಿ ಮಹೇಶ್ ಮಾತನಾಡಿ, ೨೦೨೨-೨೩ರಿಂದ ೨೦೨೬-೨೭ನೇ ಸಾಲಿನವರೆಗೆ ವಿವಿಧ ಗ್ರಾಪಂಗಳು ಹಾಗೂ ಅನುಷ್ಠಾನ ಇಲಾಖೆಗಳ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳಿಗೆ ನಿಯಮಾನುಸಾರ ಸಾಮಗ್ರಿ ಪೂರೈಸಲಾಗಿದೆ. ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಟೆಂಡರ್ ಮೂಲಕ ಕಾರ್ಯಾದೇಶ ಪಡೆದು, ಶೇ.೫ರಷ್ಟು ಭದ್ರತಾ ಠೇವಣಿ ಪಾವತಿಸಿ ಸಾಮಗ್ರಿ ನೀಡಲಾಗಿದೆ. ಆದರೆ ನಾಲ್ಕು ವರ್ಷದಿಂದ ಹಣ ಬಿಡುಗಡೆಯಾಗಿಲ್ಲ ಎಂದರು.
ಸಂಘದ ತಾಲೂಕು ಅಧ್ಯಕ್ಷ ವಿಟ್ಟಪ್ಪನಹಳ್ಳಿ ಕೋಟೆ ನಾರಾಯಣಸ್ವಾಮಿ ಮಾತನಾಡಿ, ಸಾಮಗ್ರಿ ಪೂರೈಸಿದ ಮೂರರಿಂದ ಆರು ತಿಂಗಳೊಳಗೆ ಹಣ ಪಾವತಿಸಬೇಕು. ಪೂರ್ಣಗೊಂಡ ಕಾಮಗಾರಿಗಳ ಶೇ.೫ರಷ್ಟು ಭದ್ರತಾ ಠೇವಣಿ ವಾಪಸ್ ನೀಡಬೇಕು. ಸೂಕ್ತ ದಾಖಲೆಗಳಿಲ್ಲದ ಹಾಗೂ ಸ್ಥಳ ಪರಿಶೀಲನೆಗೆ ದೂರುದಾರರು ಗೈರಾಗುವ ಒಂಬುಡ್ಸ್‌ಮನ್ ದೂರುಗಳನ್ನು ವಜಾಗೊಳಿಸಿ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದರು.
ಬೆಳಗಾನಹಳ್ಳಿ ಬಿಎಂಟಿಸಿ ಮಂಜು, ಮೇಡತಂಬಿಹಳ್ಳಿ ರಮೇಶ್, ನೆರ್ನಹಳ್ಳಿ ಚಂದ್ರಶೇಖರ್, ಮುದವತ್ತಿ ಅಂಜಿನಪ್ಪ, ಎಚ್.ಗೊಲ್ಲಹಳ್ಳಿ ಜಗದೀಶ್, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ತಿಪ್ಪಸಂದ್ರ ಸುಭಾಷ್, ಎಂ.ಬಿ. ಬೈರೇಗೌಡ, ಆರ್.ನಟರಾಜು ಇದ್ದರು.