ಆರ್‌ಐಪಿಎಲ್ ಸ್ಪಾಂಜ್ ಐರನ್ ಉದ್ದಿಮೆ ಘಟಕ ಶಾಶ್ವತ ಮುಚ್ಚಲು ಆಗ್ರಹ

KannadaprabhaNewsNetwork |  
Published : Sep 22, 2024, 01:46 AM IST
ಅ | Kannada Prabha

ಸಾರಾಂಶ

ಉದ್ದಿಮೆ ಗ್ರಾಮದಿಂದ ಕೂಗಳತೆ ದೂರದಲ್ಲಿ ಸ್ಥಾಪಿಸಲಾಗಿದೆ.

ಸಂಡೂರು: ತಾಲೂಕಿನ ನರಸಿಂಗಾಪುರ ಗ್ರಾಪಂ ವ್ಯಾಪ್ತಿಯಲ್ಲಿನ ರಣಜಿತ್‌ಪುರ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ರಣಜಿತ್‌ಪುರ ಇನ್ಫ್ರಾಸ್ಟ್ರಕ್ಚರ್ ಪ್ರೆೈವೇಟ್ ಲಿಮಿಟೆಡ್ (ಆರ್‌ಐಪಿಎಲ್) ಸ್ಪಾಂಜ್ ಐರನ್ ಉದ್ದಿಮೆಯ ಘಟಕಗಳನ್ನು ಶಾಶ್ವತವಾಗಿ ಮುಚ್ಚಲು ಆದೇಶಿಸುವಂತೆ ಕೋರಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಶುಕ್ರವಾರ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರ್ ಮಾತನಾಡಿ, ಈ ಉದ್ದಿಮೆ ಗ್ರಾಮದಿಂದ ಕೂಗಳತೆ ದೂರದಲ್ಲಿ ಸ್ಥಾಪಿಸಲಾಗಿದೆ. ಈ ಉದ್ದಿಮೆಯು ಹೊರಬಿಡುವ ಕಪ್ಪು ಧೂಳಿನಿಂದಾಗಿ ರಣಜಿತ್‌ಪುರ, ನರಸಾಪುರ ಗ್ರಾಮಗಳಲ್ಲಿನ ಜನರ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ಸುತ್ತಲಿನ ಜಮೀನುಗಳ ಕೃಷಿ ಚಟುವಟಿಕೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ ಎಂದರು.

ದಿನಕ್ಕೆ ೮.೫೦ ಲಕ್ಷ ಲೀ. ನೀರನ್ನು ದೊಡ್ಡ ಸಾಮರ್ಥ್ಯದ ಮೋಟರ್‌ಗಳನ್ನು ಬಳಸಿ ೨೦-೩೦ ಕೊಳವೆ ಬಾವಿಗಳ ಮೂಲಕ ನೀರನ್ನು ಬಳಸಿಕೊಳ್ಳುತ್ತಿರುವುದಿಂದ ರೈತ ಕೊಳವೆಬಾವಿಗಳಲ್ಲಿನ ಅಂತರ್ಜಲ ಕುಸಿತವಾಗಿದೆ. ಕೃಷಿ ಇಳುವರಿ ಕುಸಿತವಾಗಿದೆ. ಧೂಳಿನಿಂದ ಕೂಡಿದ ಮೇವನ್ನು ತಿನ್ನುವ ವನ್ಯಜೀವಿಗಳು ಹಾಗೂ ಜಾನುವಾರುಗಳ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ದೂರಿದರು.

ಕಣಿವೆಯಿಂದ ಹರಿದು ನಾರಿಹಳ್ಳಕ್ಕೆ ಸೇರುವ ನಾಲಾಗಳಿಗೆ ಅಡ್ಡಲಾಗಿ ದೊಡ್ಡ ಚೆಕ್‌ಡ್ಯಾಂಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡು, ಅಲ್ಲಿನ ನೀರನ್ನು ಉದ್ದಿಮೆಗೆ ಬಳಸುತ್ತಿರುವುದರಿಂದ, ನಾರಿಹಳ್ಳ ಜಲಾಶಯದ ಮೇಲೆ ಅವಲಂಬಿತರಾಗಿರುವ ಜನತೆ ನೀರಿನ ಕೊರತೆ ಅನುಭವಿಸುವಂತಾಗಿದೆ. ಕೃಷಿ ಜಮೀನಿಗೆ ಬಳಕೆಯಾಗುತ್ತಿರುವ ರಸ್ತೆಗೆ ಅಡ್ಡಲಾಗಿ ಚೆಕ್‌ಪೋಸ್ಟ್ ನಿರ್ಮಾಣ ಮಾಡಿಕೊಂಡು ಸಾರ್ವಜನಿಕರು ಹಾಗೂ ರೈತರು ಓಡಾಡದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದೇ ಸಂದರ್ಭದಲ್ಲಿ ಈ ಉದ್ದಿಮೆಯ ಧೂಳಿನಿಂದ ರೈತರ ಮಣ್ಣಿನ ಫಲವತ್ತತೆ, ನೀರಿನ ಪರೀಕ್ಷೆ, ಧೂಳಿನಿಂದ ಆಗಿರುವ ಬೆಳೆ ನಷ್ಟದ ಕುರಿತು ಅಧ್ಯಯನ ಮಾಡಬೇಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥರೆಡ್ಡಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್ ರಾಜ್ಯಾಧ್ಯಕ್ಷ ಟಿ.ಎಂ. ಶಿವಕುಮಾರ್, ಮುಖಂಡರಾದ ಶ್ರೀಶೈಲ ಆಲ್ದಳ್ಳಿ, ಈರಣ್ಣ ಮೂಲಿಮನೆ, ಟಿ.ಕೆ. ಮಂಜುನಾಥ, ಜಿ.ಕೆ. ನಾಗರಾಜ, ರೈತ ಸಂಘದ ಮುಖಂಡರಾದ ಮೌನೇಶ, ಕಾಡಪ್ಪ, ಪರಮೇಶಿ, ಪಂಪಾಪತಿ, ಮಂಜುನಾಥರೆಡ್ಡಿ, ಕೆಂಗಣ್ಣ, ಗಂಗಣ್ಣ ಹಾಗೂ ವಿಶ್ವನಾಥ ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ