ಕೊಟ್ಟೂರು: ನಿವೇಶನ ಮತ್ತು ವಸತಿ ಕಲ್ಪಿಸುವಂತೆ ಆಗ್ರಹಿಸಿ ಇಲ್ಲಿನ ನಿವೇಶನ ಮತ್ತು ವಸತಿರಹಿತ ತಾಲೂಕು ಸಮಿತಿ ವತಿಯಿಂದ ಬಸ್ ನಿಲ್ದಾಣ ಹತ್ತಿರದ ಬಸವಣ್ಣನ ದೇವಸ್ಥಾನದಿಂದ ಪಟ್ಟಣ ಪಂಚಾಯಿತಿಯವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ವಸತಿ ಮತ್ತು ನಿವೇಶನದ ರೈತ ಹೋರಾಟ ಸಮಿತಿ ರಾಜ್ಯ ಮಹಿಳೆ ಉಪಾಧ್ಯಕ್ಷೆ ಕೆ. ರೇಣುಕಮ್ಮ ಮಾತನಾಡಿ, ಭಾರತದ ಸಿರಿವಂತ ಕಾರ್ಪೋರೇಟ್ ಕಂಪನಿಗಳ ಮಾಲೀಕರು ಮಾತ್ರ ಪ್ರಪಂಚದ ಅತಿ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದು. ಸಾರ್ವಜನಿಕ ಸಂಪತ್ತನ್ನು ಎಗ್ಗಿಲ್ಲದೇ ಲೂಟಿ ಮಾಡುವುದಕ್ಕೆ ಸರ್ಕಾರಗಳು ಅವಕಾಶಗಳನ್ನು ಮಾಡಿಕೊಡುತ್ತಿದೆ. ಆದರೆ ಇಲ್ಲಿಯವರೆಗೂ ಕಡುಬಡವರಿಗೆ ಸೂರು ಕಲ್ಪಿಸಲು ಮುಂದಾಗುತ್ತಿಲ್ಲ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಎ. ನಸರುಲ್ಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುಡಿಹಳ್ಳಿ ಹಾಲೇಶ, ಹಲಗಿ ಸುರೇಶ, ರಾಜುಗೌಡ, ತಿಮ್ಮಪ್ಪ, ಕಾರ್ಯಕರ್ತರು ಉಪಸ್ಥಿತರಿದ್ದರು.