ಅರಣ್ಯ ಹಕ್ಕು ಅರ್ಜಿ ಪರಿಶೀಲನಾ ಪ್ರಕ್ರಿಯೆ ಮುಂದೂಡಲು ಆಗ್ರಹ

KannadaprabhaNewsNetwork | Published : Feb 5, 2025 12:32 AM

ಸಾರಾಂಶ

ಅರಣ್ಯ ಭೂಮಿಯಲ್ಲಿನ ಬಗರ್‌ಹುಕ್ಕುಂ ಸಾಗುವಳಿಯನ್ನು ಜಂಟಿ ತನಿಖೆಯಿಂದ ಪ್ರತ್ಯಕ್ಷ ಪರಿಶೀಲಿಸಿ ಸರ್ಕಾರದ ವತಿಯಿಂದ ದೃಢೀಕರಣ ನೀಡಲು ಜಿಲ್ಲಾಡಳಿತದಿಂದ ಕ್ರಮ ಆಗಬೇಕು.

ಅಂಕೋಲಾ: ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳಿಗೆ ನಾಮನಿರ್ದೆಶಿತ ಸದಸ್ಯರ ನೇಮಕ ಆಗುವವರೆಗೆ ಮತ್ತು ಪೂರ್ಣ ಪ್ರಮಾಣದ ಅರಣ್ಯ ಹಕ್ಕು ಸಮಿತಿಗಳ ರಚನೆಯಾಗುವ ವರೆಗೆ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಕ್ಲೇಮು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕೆಂದು ಅರಣ್ಯ ಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯಿಸಿತು.ಜಿಲ್ಲೆಯ ಅರಣ್ಯ ಭೂಮಿಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮತ್ತು ಪ್ರಧಾನ ಸಂಚಾಲಕ ಜಿ.ಎಂ. ಶೆಟ್ಟಿ ನೇತೃತ್ವದ ನಿಯೋಗ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರನ್ನು ಭೇಟಿ ಮಾಡಿ ಮನವಿ ನೀಡಿತು.ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಮಾತನಾಡಿ, ಅನುಸೂಚಿತ ಬುಡಕಟ್ಟು ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಮಾನ್ಯ ಮಾಡುವ ಅಧಿನಿಯಮ 2006, 2008 ಮತ್ತು 2012ರ ತಿದ್ದುಪಡಿ ನಿಯಮದಡಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಉಪವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗಳ ರಚನೆಯಾಗದಿದ್ದರೂ ನಿಯಮಬಾಹಿರವಾಗಿ ಅಧಿಕಾರೇತರ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯ ಹಕ್ಕು ಕ್ಲೇಮು ಅರ್ಜಿಗಳ ಪರಿಶೀಲನಾ ಪ್ರಕ್ರಿಯೆ ಆರಂಭಿಸಲಾಗಿದೆ. ಕ್ಲೇಮಿನ ಪರಿಗಣನೆಗಾಗಿ ಅರಣ್ಯ ಹಕ್ಕು ನಿಯಮಕ್ಕೆ ವ್ಯತಿರಿಕ್ತವಾಗಿ ನಿರ್ದಿಷ್ಟ ಸರ್ಕಾರಿ ದಾಖಲಾತಿ ಸಾಕ್ಷ್ಯ ಹಾಜರುಪಡಿಸುವಂತೆ ಕ್ಲೇಮುದಾರರಿಗೆ ನೋಟಿಸ್‌ ನೀಡಿ ಒತ್ತಾಯಿಸುತ್ತಿದ್ದು, ಇದು ಕೇಂದ್ರ ಬುಡಕಟ್ಟು ಮಂತ್ರಾಲಯದ ಆದೇಶಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದರು.ಜಿ.ಎಂ. ಶೆಟ್ಟಿ ಮಾತನಾಡಿ, ಅರಣ್ಯ ಭೂಮಿಯಲ್ಲಿನ ಬಗರ್‌ಹುಕ್ಕುಂ ಸಾಗುವಳಿಯನ್ನು ಜಂಟಿ ತನಿಖೆಯಿಂದ ಪ್ರತ್ಯಕ್ಷ ಪರಿಶೀಲಿಸಿ ಸರ್ಕಾರದ ವತಿಯಿಂದ ದೃಢೀಕರಣ ನೀಡಲು ಜಿಲ್ಲಾಡಳಿತದಿಂದ ಕ್ರಮ ಆಗಬೇಕು ಎಂದು ನಿಯೋಗವು ಜಿಲ್ಲಾಧಿಕಾರಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು.ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು. ಸಮಿತಿಯ ಅಂಕೋಲಾ ತಾಲೂಕಾಧ್ಯಕ್ಷ ರಮಾನಂದ ನಾಯ್ಕ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಜಾತ ಗಾಂವ್ಕರ್, ಪ್ರಕಾಶ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಶಂಕರ ಕೊಡಿಯಾ, ದುರ್ಗು ಹಳ್ಳೇರ, ಪಾಂಡು ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಅರಣ್ಯ ಹಕ್ಕು ವಾರ್ಡ್ ಸಮಿತಿ ನಿಷ್ಕ್ರಿಯ: ರವೀಂದ್ರ ನಾಯ್ಕ

ಕುಮಟಾ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯ ೧೦ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ೮೪೨೦ ಅರಣ್ಯವಾಸಿಗಳ ಕುಟುಂಬಗಳಿಂದ ಮಾತ್ರ ಅರ್ಜಿ ವಾರ್ಡ್‌ ಸಮಿತಿಯಡಿ ಸಮರ್ಪಕವಾಗಿ ದಾಖಲಾಗಿದ್ದು, ಇನ್ನುಳಿದ ಅರ್ಜಿಗಳು ದಾಖಲಾಗಿಲ್ಲ. ಅರಣ್ಯ ಹಕ್ಕು ಸಮಿತಿಗಳ ನಿಷ್ಕ್ರಿಯತೆಯಿಂದ ನಗರ ಅರಣ್ಯವಾಸಿಗಳು ಮಂಜೂರಿ ಪ್ರಕ್ರಿಯೆ ಅತಂತ್ರವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಪಟ್ಟಣದ ಹೊನ್ಮಾಂವದಲ್ಲಿ ಇತ್ತೀಚೆಗೆ ನಗರ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಮಾತನಾಡಿ, ನಗರ ಅರಣ್ಯ ಅತಿಕ್ರಮಣದಾರರ ಮಂಜೂರಿ ಪ್ರಕ್ರಿಯೆಗೆ ವಾರ್ಡ್ ಸಮಿತಿಗಳನ್ನು ಕಾನೂನುಬದ್ಧವಾಗಿ ರಚಿಸದೇ, ಸಮಿತಿಗಳಿಗೆ ಕಾನೂನಿನ ತಿಳಿವಳಿಕೆ ಪ್ರಸ್ತುತಪಡಿಸದೇ ವಾರ್ಡ್ ಸಭೆ, ಜಿಪಿಎಸ್ ಸರ್ವೇ, ಅರ್ಜಿ ಪರಿಶೀಲನೆ ಮುಂತಾದವು ಸಮರ್ಪಕವಾಗಿ ನಡೆದಿಲ್ಲ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಾರ್ಡ್‌ ಅರಣ್ಯ ಹಕ್ಕು ಸಮಿತಿಯ ನಿಷ್ಕ್ರಿಯತೆಯಿಂದ ಮತ್ತು ಸೂಕ್ತ ಕಾನೂನು ತಿಳಿವಳಿಕೆ ಕೊರತೆಯಿಂದ ಮಂಜೂರಿ ಪ್ರಕ್ರಿಯೆ ಕುಂಠಿತವಾಗಿದೆ ಎಂದರು.ಜಿಲ್ಲೆಯಲ್ಲಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಾದ ಶಿರಸಿ ೧೨೪೧, ಸಿದ್ದಾಪುರ ೧೩೯೧, ಯಲ್ಲಾಪುರ ೧೭೫೦, ಮುಂಡಗೋಡ ೮೫೪, ಭಟ್ಕಳ ೩೯೧, ಹೊನ್ನಾವರ ೫೧೯, ಕುಮಟಾ ೪೧೪, ಅಂಕೋಲಾ ೨೭೦, ಕಾರವಾರ ೨೦, ಹಳಿಯಾಳ(ಪಟ್ಟಣ ಪಂಚಾಯಿತಿ ೨೬೦, ಕಾರ್ಪೋರೇಶನ್ ೬೨) ೧೫೭೦ ಅರಣ್ಯವಾಸಿ ಕುಟುಂಬಗಳು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದೆ ಎಂದರು.ಸಭೆಯಲ್ಲಿ ಹೋರಾಟ ವೇದಿಕೆಯ ತಾಲೂಕು ಅಧ್ಯಕ್ಷ ಮಂಜುನಾಥ ಮರಾಠಿ, ಸೀತಾರಾಮ ನಾಯ್ಕ, ಗಜಾನನ ಪಟಗಾರ ಹೆಗಡೆ, ಕುಸುಂಬಿ ಕಿಮಾನಿ, ರಮ್ಯ ಮುಕ್ರಿ, ಗಜಾನನ ನಾಯ್ಕ, ನವೀನ ಗಜಾನನ ನಾಯ್ಕ ಇತರರು ಇದ್ದರು.

Share this article