ಸಿದ್ದಾಪುರ: ತಾಲೂಕಿನಾದ್ಯಂತ ಇರುವ ಮಳೆಮಾಪನ ಯಂತ್ರಗಳು ಬಹುತೇಕ ನಿರುಪಯುಕ್ತವಾಗಿವೆ. ಇನ್ನುಳಿದ ಕೆಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂಬ ಮಾಹಿತಿ ಇದೆ. ಮಳೆಯಿಂದಾಗುವ ಅನಾಹುತಕ್ಕೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಪಡೆಯಬೇಕೆಂದರೆ ಮಳೆಮಾಪನ ಯಂತ್ರಗಳ ಕಾರ್ಯನಿರ್ವಹಣೆ ಸಮರ್ಪಕವಾಗಿರಬೇಕು ಈ ಕುರಿತು ಗಮನ ಹರಿಸಿ ಬೆಳೆ ವಿಮೆ ಸಂಸ್ಥೆಯಾದ ಕೆಎಸ್‌ಡಿಎಂಸಿಯವರಿಗೆ ಸೂಚನೆ ನೀಡಬೇಕು ಎಂದು ತಾಲೂಕ ಬಿಜೆಪಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದೆ.
ಈ ಕುರಿತು ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ತಾಲೂಕಿನಲ್ಲಿ ಮೇ ತಿಂಗಳ ಅಂತ್ಯದಿಂದಲೂ ಭಾರಿ ಮಳೆಯಾಗುತ್ತಿದ್ದು, ಮಳೆ ಹಾಗೂ ತೇವಾಂಶದ ಕಾರಣ ಅಡಕೆ ಫಸಲಿಗೆ ಅಲ್ಲಲ್ಲಿ ಕೊಳೆರೋಗ ಕಾಣಿಸಿಕೊಳ್ಳುತ್ತಿದೆ. ತಾಲೂಕಿನ ರೈತರು ಬೆಳೆಸಾಲದೊಂದಿಗೆ ಬೆಳೆ ವಿಮೆ ಕಂತನ್ನು ಈಗಾಗಲೇ ತುಂಬುತ್ತಿದ್ದಾರೆ. ರೈತರಿಗೆ ಬೆಳೆ ವಿಮೆಯ ಸೌಲಭ್ಯ ಸಿಗಬೇಕೆಂದರೆ ವೈಜ್ಞಾನಿಕವಾಗಿ ಮಳೆ ಮಾಪನ ಪ್ರತಿದಿನ ಆಗಬೇಕಾಗಿದೆ. ಒಂದೊಮ್ಮೆ ಸಮಯಕ್ಕೆ ಸರಿಯಾಗಿ ಜೂನ್-ಜುಲೈ ತಿಂಗಳಿನಲ್ಲಿ ವಿಮಾ ಕಂಪನಿಗಳಿಗೆ ಹಿಮ್ಮಾಹಿತಿ ಸಿಗದಿದ್ದರೆ ರೈತರಿಗೆ ಬಹಳ ನಷ್ಟವಾಗುತ್ತದೆ. ಹಾಗಾದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಿರುತ್ತದೆ. ಈವರೆಗೆ ಮಳೆಮಾಪನದ ಟೆಂಡರ್ ಪಡೆದಿರುವ ಕಂಪನಿಯವರು ಮಳೆಮಾಪನ ಯಂತ್ರಗಳು ಯಾವ ಸ್ಥಿತಿಯಲ್ಲಿವೆ ಎನ್ನುವದನ್ನು ಪರಿಶೀಲಿಸಿದ್ದಾಗಲೀ, ದುಸ್ಥಿತಿಯಲ್ಲಿರುವ ಯಂತ್ರಗಳನ್ನು ರಿಪೇರಿಗೊಳಿಸಿದ್ದಾಗಲೀ ಇರುವದಿಲ್ಲ. ಈಗಾಗಲೇ ಜೂನ್ ತಿಂಗಳು ಕಳೆದಿದ್ದು ತಾಲೂಕಿನಲ್ಲಿ ವಿಪರೀತ ಮಳೆಯಾಗುತ್ತಿದೆ. ತಾಲೂಕಿನಲ್ಲಿ ಸುರಿದಿರುವ ಮಳೆಯ ಮಾಹಿತಿ ಏನಾಗಿದೆ ಎನ್ನುವುದು ರೈತರಿಗೆ ತಿಳಿಯದೇ ಅವರು ಆತಂಕಕ್ಕೆ ಈಡಾಗಿದ್ದಾರೆ.ಇನ್ನು 15 ದಿನಗಳಲ್ಲಿ ಈ ವ್ಯವಸ್ಥೆ ಸರಿಯಾಗದೇ ಇದ್ದರೆ ರೈತರನ್ನು ಒಗ್ಗೂಡಿಸಿ ತಹಸೀಲದಾರ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಪ್ರತಿಭಟನೆ ನಡೆಸುತ್ತೇವೆ ಎಂದು ತಹಸೀಲದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲದಾರ ಎಂ.ಆರ್.ಕುಲಕರ್ಣಿ ಮನವಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.ಬಿಜೆಪಿಯ ಪ್ರಮುಖರಾದ ಗುರುರಾಜ ಶಾನಭಾಗ, ನಂದನ ಬರ‍್ಕರ, ಎಸ್.ಕೆ. ಮೇಸ್ತ, ದಿವಾಕರ ನಾಯ್ಕ ಹೆಮ್ಮನಬೈಲ್, ವಿನಯ ಹೊನ್ನೆಗುಂಡಿ, ರವಿಕುಮಾರ ನಾಯ್ಕ, ಶ್ರೀಕಾಂತ ಭಟ್ಟ, ವೆಂಕಟೇಶ ಹೊಸೂರು ಇದ್ದರು.