ಕನ್ನಡಪ್ರಭ ವಾರ್ತೆ ಮೂಡಲಗಿ
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಮರು ಪರಿಶೀಲನೆಗೆ ಒತ್ತಾಯಿಸಿ ತಾಲೂಕಿನ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆ ಮೂಲಕ ಕಲ್ಮೇಶ ವೃತ್ತಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ಯತ್ನಾಳರ ಉಚ್ಚಾಟನೆಗೆ ಕಾರಣವಾದ ಯಡಿಯೂರಪ್ಪ ಕುಟುಂಬಕ್ಕೆ ದಿಕ್ಕಾರ ಕೂಗುವ ಮೂಲಕ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ನಿಂಗಪ್ಪ ಫಿರೋಜಿ ಮಾತನಾಡಿ, ಶಾಸಕ ಯತ್ನಾಳರು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿಲ್ಲ. ಅವರನ್ನು ಉಚ್ಚಾಟನೆ ಮಾಡಿರುವುದು ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ಕೂಡಲೇ ವರಿಷ್ಠರು ಉಚ್ಚಾಟನೆ ಆದೇಶ ಹಿಂಪಡೆಯಬೇಕು. ಉತ್ತರ ಕರ್ನಾಟಕದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿರುವ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವುದರಿಂದ ಸಾಕಷ್ಟು ಕಾರ್ಯಕರ್ತರು ನೊಂದಿದ್ದಾರೆ ಎಂದರು.ಶಿವಬಸು ಹಂದಿಗುಂದ, ಬಸವರಾಜ ಕಾಪಸಿ, ಬಸಲಿಂಗ ನಿಂಗನೂರ, ರವಿ ಮಹಾಲಿಂಗಪೂರ ಮಾತನಾಡಿ, ಕೇಂದ್ರದ ವರಿಷ್ಠರು ತೆಗೆದುಕೊಂಡ ತಮ್ಮ ನಿರ್ಧಾರ ಮರುಪರಿಶೀಲಿಸಬೇಕು. ನೇರ ನಿಷ್ಠುರವಾದಿ, ಒಬ್ಬ ಹಿರಿಯ ನಾಯಕರನ್ನು ಕಳೆದುಕೊಂಡರೆ ಪಕ್ಷಕ್ಕೆ ನಷ್ಟವಾಗಲಿದೆ. ಅದರಲ್ಲೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಉಚ್ಚಾಟನೆಯಿಂದ ಪಕ್ಷಕ್ಕೆ ನಷ್ಟ ಉಂಟಾಗಲಿದ್ದು, ಎಲ್ಲಾ ಕೋನಗಳಿಂದಲೂ ಮತ್ತೊಮ್ಮೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಸೂಕ್ತವೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಗಮೇಶ ಕೌಜಲಗಿ, ಸುಭಾಷ್ ಢವಳೇಶ್ವರ, ಪ್ರಶಾಂತ ನಿಡಗುಂದಿ, ಈರಪ್ಪ ಬನ್ನೂರ, ಮೌನೇಶ ಪತ್ತಾರ, ಕೃಷ್ಣ ನಾಸಿ, ಶಿವಲಿಂಗಪ್ಪ ಗೋಕಾಕ, ಸಿ.ಎನ್.ಮುಗಳಖೋಡ, ರಾಮಣ್ಣ ಹಂದಿಗುಂದ, ಜಯಾನಂದ ಪಾಟೀಲ, ಕೆ.ಎಚ್.ನಾಗರಾಳ, ಶಿವನಗೌಡ ಪಾಟೀಲ, ಬಸವರಾಜ ರಂಗಾಪೂರ, ಈರಪ್ಪ ಢವಳೇಶ್ವರ, ಶಂಕರ ಗೌಡಿಗೌಡರ, ಚನ್ನಪ್ಪ ಪಾಟೀಲ, ಚೇತನ್ ನಿಶಾನಿಮಠ, ಶೀತಲ್ ಬೇವಿನಕಟ್ಟಿ, ಅಜ್ಜಪ್ಪ ಕಂಕಣವಾಡಿ, ಈರಣ್ಣ ಅಂಬಿ, ಶೇಖರ ತೆಲಿ, ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಿಂದ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಇದ್ದರು.