ರೈತರ 206 ಕೋಟಿ ರು.ಬಾಕಿ ರಾಗಿ ಹಣ ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : Aug 14, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ಜಿಲ್ಲೆಯ ರೈತರಿಗೆ ಕೊಡಬೇಕಾಗಿರುವ ಕಳೆದ ವರ್ಷದ ಬೆಂಬಲ ಬೆಲೆ ರಾಗಿ ಖರೀದಿಯ 206 ಕೋಟಿ ರು. ಬಾಕಿ ಯನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಬಿಜೆಪಿ ರೈತ ಮೋರ್ಚಾ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲೆಯ ರೈತರಿಗೆ ಕೊಡಬೇಕಾಗಿರುವ ಕಳೆದ ವರ್ಷದ ಬೆಂಬಲ ಬೆಲೆ ರಾಗಿ ಖರೀದಿಯ 206 ಕೋಟಿ ರು. ಬಾಕಿ ಯನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಬಿಜೆಪಿ ರೈತ ಮೋರ್ಚಾ ಮುಖಂಡರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಗುರುವಾರ ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿಯವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದ ರೈತ ಮೋರ್ಚಾ ಮುಖಂಡರು ತಕ್ಷಣ ರೈತರ ಬಾಕಿ ಇರುವ ರಾಗಿ ಹಣ ಬಿಡುಗಡೆ ಮಾಡಲು ಆಗ್ರಹಿಸಿದರು. ಈ ವೇಳೆ ಮಾತನಾಡಿದ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡರು, ತುಮಕೂರು ಜಿಲ್ಲೆ ರಾಜ್ಯದ ಪ್ರಮುಖ ರಾಗಿ ಉತ್ಪಾದನಾ ಜಿಲ್ಲೆಗಳಲ್ಲಿ ಒಂದಾಗಿದ್ದು, ಜಿಲ್ಲೆಯ ಸಾವಿರಾರು ರೈತರು ರಾಗಿ ಬೆಳೆಯನ್ನೇ ಪ್ರಮುಖ ಆದಾಯದ ಮೂಲವನ್ನಾಗಿ ಅವಲಂಬಿಸಿದ್ದಾರೆ.ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲಾಗಿದ್ದು, ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಸುಮಾರು 206 ಕೋಟಿ ರು.ರಾಗಿ ಖರೀದಿ ಹಣ ರೈತರಿಗೆ ಬಾಕಿ ಉಳಿಸಿಕೊಂಡಿರುವುದು ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.ಈಗಾಗಲೇ ಮಳೆಕೊರತೆ, ಬರ ಪರಿಸ್ಥಿತಿ, ನೀರಿನ ಅಭಾವ ಹಾಗೂ ಬೆಳೆ ನಷ್ಟದಿಂದ ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಮಳೆಯಾಶ್ರಿತ ರಾಗಿ ಬೆಳೆಗಾರರು ಬಿತ್ತನೆ ಮಾಡಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಮತ್ತೊಂದೆಡೆ ಈಗಾಗಲೇ ಬೆಳೆದ ರಾಗಿಯನ್ನು ಸರ್ಕಾರಕ್ಕೆ ಮಾರಾಟ ಮಾಡಿದ ರೈತರಿಗೆ 206 ಕೋಟಿ ರು. ಹಣ ಇನ್ನೂ ಪಾವತಿಯಾಗದೆ ಇರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ರೈತರು ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲ, ಬಿತ್ತನೆ ಬೀಜ, ರಸಗೊಬ್ಬರ, ಕೂಲಿ ಹಾಗೂ ಇತರೆ ಕೃಷಿ ವೆಚ್ಚಗಳನ್ನು ಭರಿಸಲು ರಾಗಿ ಮಾರಾಟದಿಂದ ಬರಬೇಕಾದ ಹಣವನ್ನು ಅವಲಂಬಿಸಿದ್ದಾರೆ. ಆದ್ದರಿಂದ ಹಣ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ರೈತರಿಗೆ ತೀವ್ರ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಹೇಳಿದರು.ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್ ಮಾತನಾಡಿ, ರಾಗಿ ಬೆಳೆಯೇ ಬದುಕಿನ ಆಧಾರವಾಗಿರುವ ತುಮಕೂರು ಜಿಲ್ಲೆಯ ರೈತರಿಗೆ ಸರ್ಕಾರ ಬರಪರಿಸ್ಥಿತಿಯಲ್ಲಿ ಪರಿಹಾರ ನೀಡಬೇಕಾಗಿತ್ತು. ಆದರೆ ರೈತರಿಗೆ ಕೊಡಬೇಕಾಗಿರುವ ಬಾಕಿ ಇರುವ 206 ಕೋಟಿ ರು.ಗಳನ್ನೇ ಕೊಡದಿರುವುದು ಅನ್ಯಾಯವಾಗಿದೆ. ರಾಗಿ ಖರೀದಿ ಹಣವನ್ನು ಯಾವುದೇ ವಿಳಂಬವಿಲ್ಲದೆ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬೀರನಕಲ್ಲು ಸತೀಶ್, ಖಜಾಂಚಿ ಗಿರೀಶ್, ಕಾರ್ಯದರ್ಶಿ ಸಿದ್ಧರಾಜು, ನಗರ ಅಧ್ಯಕ್ಷ ರವೀಶ್, ಪ್ರಧಾನ ಕಾರ್ಯದರ್ಶಿ ಲೋಕೇಶ್, ಮುಖಂಡರಾದ ಚಂದ್ರಣ್ಣ, ಸೋಮಶೇಖರ್, ನಾಗೇಶ್, ಹರೀಶ್, ಕೀರ್ತಿ ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ, ಟ್ಯಾಕ್ಸಿ ನಿಲ್ದಾಣ ಕಾಮಗಾರಿ ವಸ್ತುಗಳು ನಗರಸಭೆ ವಶಕ್ಕೆ
ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ವಿರುದ್ಧ ಪಿಂಡ ಪ್ರದಾನ