ಗಂಗಾವತಿ: ಗಂಗಾವತಿ - ದರೋಜಿ (36 ಕಿಮೀ) ಹೊಸ ರೈಲ್ವೆ ಮಾರ್ಗಕ್ಕೆ ತಕ್ಷಣ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯಿಸಿದ್ದಾರೆ.
ಈಗಾಗಲೇ ಮಾರ್ಗದ ಸರ್ವೇ ಆಗಿ, ಡಿಪಿಆರ್ ಸಿದ್ಧವಾಗಿದೆ. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಯೋಜನೆ ಪೂರ್ಣಗೊಂಡರೆ ಗಂಗಾವತಿ-ಬಳ್ಳಾರಿ-ಗುಂತಕಲ್ ನೇರ ಸಂಪರ್ಕ ಸಿಗುತ್ತದೆ. ರೈತರು, ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳಿಗೆ ಅತ್ಯಂತ ಅನುಕೂಲವಾಗುತ್ತದೆ. ಆದ್ದರಿಂದ 2026-27ನೇ ಸಾಲಿನಲ್ಲಿ ಈ ಯೋಜನೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಪ್ರಾರಂಭಿಸಲು ಆದೇಶಿಸಬೇಕು ಎಂದು ಕೋರಿದ್ದಾರೆ.
ಸಿಂಧನೂರು - ಗಂಗಾವತಿ - ಹುಬ್ಬಳ್ಳಿ ರೈಲನ್ನು ಗೋವಾ ವರೆಗೆ ವಿಸ್ತರಿಸಬೇಕು. ಪ್ರಸ್ತುತ ಸಿಂಧನೂರು - ಗಂಗಾವತಿ - ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಕಾರ್ಯನಿರ್ವಹಿಸುತ್ತಿದೆ. ಹಂಪಿ, ಆನೆಗುಂದಿ, ಕಿಷ್ಕಿಂಧಾ ಪ್ರದೇಶಕ್ಕೆ ಪ್ರತಿದಿನ ಸಾವಿರಾರು ದೇಶ-ವಿದೇಶಿ ಪ್ರವಾಸಿಗರು ಬರುತ್ತಾರೆ. ಗೋವಾ ಕೂಡ ಪ್ರಮುಖ ಪ್ರವಾಸಿ ತಾಣ. ಆದ್ದರಿಂದ ಈ ರೈಲನ್ನು ಸಿಂಧನೂರು - ಹುಬ್ಬಳ್ಳಿ - ಮಡಗಾಂವ್ (ಗೋವಾ) ವರೆಗೆ ವಿಸ್ತರಿಸಿದರೆ ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ಸಿಗುತ್ತದೆ ಮತ್ತು ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ನೇರ ಸಂಪರ್ಕ ಸಿಗುತ್ತದೆ ಎಂದು ನಿಯೋಗ ಮನವಿ ಮಾಡಿದೆ.ಸಿಂಧನೂರು - ಬೆಂಗಳೂರು ನೂತನ ವಂದೇ ಭಾರತ್ ರೈಲು ಮಂಜೂರಿ ಮಾಡಬೇಕು ಎಂದು ಕೋರಿರುವ ನಿಯೋಗ ಗಂಗಾವತಿಯ ನೂತನ ಬಸ್ ನಿಲ್ದಾಣದ ಬಳಿ ಹೊಸ ರೈಲ್ವೆ ನಿಲ್ದಾಣ , ರೈಲ್ವೆ ಸ್ಟಾಫ್‌ಗೆ ಅನುಮತಿ ನೀಡಬೇಕು. ಕೂಡಲೇ ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ಕೋರಿದೆ.