ಮುಂಡಗೋಡ: ಪಟ್ಟಣದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶನಿವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ವಿವಿಧ ಕಲಾ ತಂಡಗಳ ಆಕರ್ಷಕ ಪ್ರದರ್ಶನ, ವಾದ್ಯಗಳ ಮೊಳಗುವಿಕೆ ಹಾಗೂ ಸಾವಿರಾರು ಭಕ್ತರ ಉತ್ಸಾಹದಿಂದ ಪಟ್ಟಣದ ಪ್ರಮುಖ ಬೀದಿಗಳು ಹಬ್ಬದ ವಾತಾವರಣದಲ್ಲಿ ಕಂಗೊಳಿಸಿದವು.
ಪ್ರಮುಖ ಬೀದಿಗಳಲ್ಲಿ ಸಾಗಿದ ಗಣಪತಿ ಮೂರ್ತಿಯ ಮೆರವಣಿಗೆಯನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ್ದರು. ಭಕ್ತರು ಗಣಪತಿ ನಾಮಸ್ಮರಣೆ, ಜಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಯುವಕರು ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಜನರು ಭಕ್ತಿಭಾವದಿಂದ ಗಣಪತಿಯನ್ನು ವೀಕ್ಷಿಸಿ ಪೂಜೆ ಸಲ್ಲಿಸಿದರು.
ಕಣ್ಮನ ಸೆಳೆದ ಕಲಾ ವೈಭವ: ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬೇಡರ ವೇಷ ಗೊಂಬೆ ಕುಣಿತ, ಡೊಳ್ಳು ವಾದನ ಹಾಗೂ ನಾಸಿಕ್ ಡೋಲ್, ಪಂಜಾಬ್ ತಾಷಾ ಸೇರಿದಂತೆ ವಿವಿಧ ಕಲಾ ತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ನೆರೆದಿದ್ದರು.ರಾತ್ರಿ ಸುಮಾರು ೧೧ ಗಂಟೆ ವೇಳೆಗೆ ಮೆರವಣಿಗೆ ಪಟ್ಟಣದ ಶಿವಾಜಿ ಸರ್ಕಲ್ ತಲುಪಿತು. ಬಳಿಕ ಗಣಪತಿ ಮೂರ್ತಿಯನ್ನು ಬಸವಣ್ಣ ದೇವಾಲಯದ ಆವರಣದಲ್ಲಿರುವ ಹೊಂಡಕ್ಕೆ ಕೊಂಡೊಯ್ದು ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ವಿಸರ್ಜನೆ ನೆರವೇರಿಸಲಾಯಿತು.