ಓದಿನ ಜತೆಗೆ ಯಕ್ಷಗಾನವನ್ನೂ ಅಷ್ಟೇ ಉತ್ಸಾಹದಿಂದ ಮುನ್ನೆಡೆಸಿಕೊಂಡು ಬರುತ್ತಿರುವ ಈಕೆ, ಸ್ತ್ರೀ-ಪುರುಷ ಎರಡೂ ಪಾತ್ರಗಳಲ್ಲಿ ಅಭಿನಯಿಸುವ ಸಾಮರ್ಥ್ಯ ಹೊಂದಿದ್ದಾಳೆ. ಅದರಲ್ಲೂ ಪುರುಷ ಪಾತ್ರಗಳಲ್ಲಿನ ಅಭಿನಯವೇ ಆಕೆಯ ವಿಶೇಷತೆ.
ರಾಘು ಕಾಕರಮಠ
ಅಂಕೋಲಾ: ಯಕ್ಷಗಾನದ ಬಣ್ಣದ ಲೋಕಕ್ಕೆ ಕಾಲಿಟ್ಟು ಕೇವಲ ನಾಲ್ಕು ವರ್ಷಗಳಲ್ಲೇ 130ಕ್ಕೂ ಹೆಚ್ಚು ಪ್ರದರ್ಶನ ನೀಡಿ, ಬಾಲ ಪ್ರತಿಭೆಯಾಗಿ ಗಮನ ಸೆಳೆಯುತ್ತಿರುವ ಪಟ್ಟಣದ ಅಜ್ಜಿಕಟ್ಟಾದ ಅರ್ಪಿತಾ ವೆಂಕಟರಮಣ ಭಟ್ ಇದೀಗ ಯಕ್ಷ ರಂಗದ ಭರವಸೆಯ ಪ್ರತಿಭೆಯಾಗಿ ಗುರುತಿಸಿಕೊಳ್ಳುತ್ತಿದ್ದಾಳೆ.
ಮೂಲತಃ ಯಲ್ಲಾಪುರ ತಾಲೂಕಿನ ಇಡಗುಂದಿಯವರಾದ 13 ವರ್ಷದ ಅರ್ಪಿತಾ, ಅಂಕೋಲಾದ ಜೈಹಿಂದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಓದಿನ ಜತೆಗೆ ಯಕ್ಷಗಾನವನ್ನೂ ಅಷ್ಟೇ ಉತ್ಸಾಹದಿಂದ ಮುನ್ನೆಡೆಸಿಕೊಂಡು ಬರುತ್ತಿರುವ ಈಕೆ, ಸ್ತ್ರೀ-ಪುರುಷ ಎರಡೂ ಪಾತ್ರಗಳಲ್ಲಿ ಅಭಿನಯಿಸುವ ಸಾಮರ್ಥ್ಯ ಹೊಂದಿದ್ದಾಳೆ. ಅದರಲ್ಲೂ ಪುರುಷ ಪಾತ್ರಗಳಲ್ಲಿನ ಅಭಿನಯವೇ ಆಕೆಯ ವಿಶೇಷತೆ.
ಭಸ್ಮಾಸುರ ಮೋಹಿನಿ ಯಕ್ಷಗಾನದಲ್ಲಿ ವಿಷ್ಣುವಿನ ಪಾತ್ರ, ಜಾಂಬವತಿ ಕಲ್ಯಾಣದಲ್ಲಿ ಕೃಷ್ಣನ ಪಾತ್ರ ಹಾಗೂ ಲವಕುಶದಲ್ಲಿ ಚಂದ್ರಕೇತು ಪಾತ್ರ ಸೇರಿದಂತೆ ಹಲವು ಪಾತ್ರಗಳಿಗೆ ಅರ್ಪಿತಾ ಜೀವ ತುಂಬಿದ್ದಾಳೆ. ಪಾತ್ರಕ್ಕೆ ತಕ್ಕಂತೆ ವೇಷಭೂಷಣವನ್ನು ತಾನೇ ಸಿದ್ಧಪಡಿಸಿಕೊಂಡು, ಆತ್ಮವಿಶ್ವಾಸದಿಂದ ಯಕ್ಷ ವೇದಿಕೆ ಏರುವುದು ಈಕೆಯ ವಿಶೇಷ.
ಹನುಮಟ್ಟಾದ ಪುನೀತ್ ನಾಯ್ಕ ಅವರಿಂದ ಯಕ್ಷಗಾನದ ಹೆಜ್ಜೆಗಳನ್ನು ಕಲಿತಿರುವ ಅರ್ಪಿತಾ, ಮುಂದಿನ ತಾಳಭ್ಯಾಸವನ್ನು ಲೋಕೇಶ ಗುಣವಂತೆ ಅವರಿಂದ ಮುಂದುವರಿಸುತ್ತಾಳೆ. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಯಕ್ಷಗಾನ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಕೆ, ಪ್ರದರ್ಶನ ಮುಗಿಯುವವರೆಗೂ ವೇದಿಕೆಯ ಮೇಲೆ ಉತ್ಸಾಹ ಕಳೆದುಕೊಳ್ಳುವುದಿಲ್ಲ.
ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡಿದರೂ, ಬೆಳಗ್ಗೆ ಮತ್ತೆ ಶಾಲೆಗೆ ತೆರಳಿ ಲವಲವಿಕೆಯಿಂದ ಪಾಠ- ಪ್ರವಚನಗಳಲ್ಲಿ ತೊಡಗಿಸಿಕೊಳ್ಳುವ ಅರ್ಪಿತಾಳಲ್ಲಿ ಕಲೆಯ ಜತೆಗೆ ಶೈಕ್ಷಣಿಕ ಪ್ರತಿಭೆಯೂ ಗಮನಾರ್ಹವಾಗಿದೆ. ವಾಕ್ಚಾತುರ್ಯದಲ್ಲಿಯೂ ಪರಿಣತಿ ಹೊಂದಿರುವ ಈಕೆಗೆ ತಂದೆ ವೆಂಕಟರಮಣ ಭಟ್ ಅವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನಿರಂತರವಾಗಿ ದೊರೆಯುತ್ತಿದೆ. ತಾಯಿ ನಾಗರತ್ನ ಭಟ್ ಕೂಡ ಮನೆಯಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಅಭ್ಯಾಸ ಮಾಡಿಸುತ್ತಾ ಮಗಳ ಕಲಾ ಪಯಣಕ್ಕೆ ಬೆನ್ನೆಲುಬಾಗಿದ್ದಾರೆ.ಶಿಕ್ಷಣದಲ್ಲಿ ಪ್ರತಿಭಾವಂತೆಯಾಗಿರುವ ಅರ್ಪಿತಾ, ಸಂಗೀತ ಹಾಗೂ ಕ್ರೀಡೆಯಲ್ಲಿಯೂ ವಿಶೇಷ ಆಸಕ್ತಿ ಮತ್ತು ಪ್ರತಿಭೆ ಹೊಂದಿದ್ದಾಳೆ. ಓದು, ಕಲೆ, ಕ್ರೀಡೆ- ಮೂರೂ ಕ್ಷೇತ್ರಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಈ ಬಾಲ ಪ್ರತಿಭೆಯ ಯಕ್ಷಗಾನ ಪಯಣ ಮುಂದಿನ ದಿನಗಳಲ್ಲಿ ಮತ್ತಷ್ಟು ಎತ್ತರಕ್ಕೇರುವ ನಿರೀಕ್ಷೆ ಮೂಡಿಸಿದೆ.
ವಿಶೇಷ ಆಸಕ್ತಿ: ನನಗೆ ಯಕ್ಷರಂಗದಲ್ಲಿ ಏನೋ ವಿಶೇಷ ಗೌರವ ಆಸಕ್ತಿ ಇದೆ. ಈ ಯಕ್ಷ ಪರಂಪರೆ ಉಳಿಸುವ ನಿಟ್ಟಿನಲ್ಲಿ ನಾನು ಕೂಡ ಒಂದು ಕೊಡುಗೆ ನೀಡಬೇಕು. ಅದರ ಜತೆಗೆ ಸಾಧನೆ ಮಾಡಬೇಕು ಎಂಬ ಮಹಾದಾಸೆ ಇದೆ ಎಂದು ಅರ್ಪಿತಾ ಭಟ್ ತಿಳಿಸಿದರು.
ಅದ್ಭುತ ಕೊಡುಗೆ: ಆತ್ಮವಿಶ್ವಾಸದ ಅಭಿನಯದ ಮೂಲಕ ಯಕ್ಷಲೋಕಕ್ಕೆ ಅದ್ಭುತ ಕೊಡುಗೆಯಾಗಿರುವ ಅರ್ಪಿತಾಳ ಅಭಿನಯ ಪ್ರೇಕ್ಷಕರ ಗಮನ ಸೆಳೆಯುತ್ತಿರುವದು ಮಾದರಿಯಾಗಿದೆ. ಶೈಕ್ಷಣಿಕ ಚಟುವಟಿಕೆಯೊಂದಿಗೆ ಯಕ್ಷಗಾನದಲ್ಲಿ ಅರ್ಪಿಸಿಕೊಂಡ ಅವಳ ಕಲಾ ಪ್ರೇಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಯಕ್ಷಗಾನ ಕಲಾವಿದರಾದ ರಾಜೇಶ ನಾಯಕ, ಸೂರ್ವೆ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.