ಮನುಕುಲದ ಆರೋಗ್ಯವೇ ಔಷಧ ತಜ್ಞರ ಸೇವೆಯ ಗುರಿಯಾಗಲಿ: ಶ್ರೀಗಳು

KannadaprabhaNewsNetwork |  
Published : Sep 28, 2026, 02:00 AM IST
ಕಾರ್ಯಕ್ರಮದಲ್ಲಿ ಶಿವಾನಂದ ಬೃಹನ್ಮಠದ ಜ.ಸದಾಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಔಷಧವನ್ನು ಕೇವಲ ವಾಣಿಜ್ಯ ವಸ್ತುವಾಗಿ ನೋಡದೆ, ಮನುಕುಲದ ಆರೋಗ್ಯಕ್ಕಾಗಿ ದೊರೆತ ಅಮೂಲ್ಯ ಸಂಪತ್ತು ಎಂಬ ಭಾವನೆಯಿಂದ ಔಷಧ ತಜ್ಞರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ಗದಗ

ಔಷಧವನ್ನು ಕೇವಲ ವಾಣಿಜ್ಯ ವಸ್ತುವಾಗಿ ನೋಡದೆ, ಮನುಕುಲದ ಆರೋಗ್ಯಕ್ಕಾಗಿ ದೊರೆತ ಅಮೂಲ್ಯ ಸಂಪತ್ತು ಎಂಬ ಭಾವನೆಯಿಂದ ಔಷಧ ತಜ್ಞರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಶಿವಾನಂದ ಬೃಹನ್ಮಠದ ಜ.ಸದಾಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಎಲ್ಲ ತಾಲೂಕು ಘಟಕಗಳ ಸಹಯೋಗದೊಂದಿಗೆ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆ ಹಾಗೂ 2026 ಕೆಮಿಸ್ಟ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ನಗು, ನಡಿಗೆ, ಆರೋಗ್ಯಕರ ಆಹಾರ, ಶುದ್ಧ ಗಾಳಿ ಮತ್ತು ಉತ್ತಮ ಬಿಸಿಲು ಕೂಡ ಶಕ್ತಿಶಾಲಿ ಔಷಧಿ, ಶರೀರಕ್ಕೆ ಇವುಗಳಿಂದ ಅಗತ್ಯವಾದ ಆರೋಗ್ಯ ದೊರೆಯದಾಗ ಮಾತ್ರ ಹೊರಗಿನ ಔಷಧದ ಅವಶ್ಯಕತೆ ಬರುತ್ತದೆ ಎಂದರು.

ಭಾರತೀಯ ಪರಂಪರೆಯಲ್ಲಿ ಔಷಧ ವಿಜ್ಞಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಋಷಿಗಳ ಆಶ್ರಮಗಳೇ ಹಿಂದಿನ ಕಾಲದಲ್ಲಿ ಸಣ್ಣ ಔಷಧಾಲಯಗಳಂತೆ ಕಾರ್ಯನಿರ್ವಹಿಸುತ್ತಿದ್ದವು. ಪ್ರಕೃತಿಯಲ್ಲಿರುವ ಪ್ರತಿಯೊಂದು ಸಸ್ಯ, ಎಲೆ, ಬೇರು, ಕಾಂಡ, ಹೂವು ಮತ್ತು ಕಾಯಿಯಲ್ಲಿಯೂ ಔಷಧೀಯ ಗುಣ ಅಡಗಿದೆ. ಪ್ರಕೃತಿಯಲ್ಲಿ ಔಷಧೀಯ ಗುಣವಿಲ್ಲದ ಯಾವುದೇ ಸಸ್ಯಮೂಲವಿಲ್ಲ. ಆದರೆ ಅದರ ಗುಣವನ್ನು ಗುರುತಿಸಿ, ಸರಿಯಾದ ರೀತಿಯಲ್ಲಿ ಬಳಸುವ ಜ್ಞಾನ ಅತ್ಯಗತ್ಯ ಎಂದರು.

ಗದಗ ವೃತ್ತದ ಸಹಾಯಕ ಔಷಧ ನಿಯಂತ್ರಕ (ಪ್ರಭಾರಿ) ಸಂಗಣ್ಣ ಶೀಳಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ), ಜೀನ್ ಥೆರಪಿ, ಸ್ಟೆಮ್ ಸೆಲ್ ತಂತ್ರಜ್ಞಾನ ಸೇರಿದಂತೆ ಹೊಸ ಬೆಳವಣಿಗೆಗಳು ವೇಗವಾಗಿ ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಔಷಧ ಕ್ಷೇತ್ರದಲ್ಲೂ ದೊಡ್ಡ ಬದಲಾವಣೆಗಳು ಸಂಭವಿಸಲಿದ್ದು, ಔಷಧ ತಜ್ಞರು ಈ ತಂತ್ರಜ್ಞಾನಗಳ ಬಗ್ಗೆ ನಿರಂತರವಾಗಿ ಜ್ಞಾನ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಸುರೇಶ ನಿಡಗುಂದಿ, ರುದ್ರಗೌಡ್ರ ಅಯ್ಯನಗೌಡ್ರ, ಅನಿಲರಡ್ಡಿ ಕರೂರ, ಸಂಜೀವರಡ್ಡಿ ಚಿಂತಕೂಲಾ, ಉಮೇಶ ಮೆಣಸಗಿ, ಶಶಿಧರ ಆನೆಗುಂದಿ, ಸತೀಶ ಕುಬಸದ, ಸುರೇಶ ಪಾಟೀಲ, ಎಸ್.ಕೆ. ಕಲ್ಲೂರ, ಗಂಗಾಧರಯ್ಯ ಪುರಾಣಿಕಮಠ, ಶಂಭುಲಿಂಗಯ್ಯ ಹುಣಶಿಮರದ ಅವರಿಗೆ 2026ರ ಕೆಮಿಸ್ಟ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ಕುಸನೂರ, ಚನ್ನಬಸಪ್ಪ ರಡ್ಡೇರ, ಗುರುಸಿದ್ಧಪ್ಪ ಪಿರಂಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಬಿ. ದಾನಪ್ಪಗೌಡ್ರ ಮಾತನಾಡಿದರು. ಚೇಂಬರ್ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ, ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಜಿಲ್ಲಾ ಪ್ರತಿನಿಧಿ ಮಾಲತೇಶ ರಮಾಣಿ, ರಾಜ್ಯ ಸಮಿತಿ ಸದಸ್ಯ ಎಂ.ಎ. ಲಿಂಗನಗೌಡ್ರ, ಎಂ.ಡಿ. ಕಾಬಳ್ಳಿ ಸೇರಿ ಇತರರು ಇದ್ದರು. ಮಂಜುಳಾ ಕುಬಸದ ಪ್ರಾರ್ಥಿಸಿದರು. ಆರ್.ಇ. ನದಾಫ ನಿರೂಪಿಸಿದರು. ಜ್ಞಾನೇಶ್ವರ ಖೋಕಲೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರಿಗೆ ನೆಲೆಗಟ್ಟು ಕಲ್ಪಿಸಿದ ಶರಣರ ಕಾಯಕ ತತ್ವ
ಕಲ್ಯಾಣ ಕರ್ನಾಟಕ ಪ್ರತಿಭಾವಂತ ಕಲಾದವಿದರು