ಶಿರಸಿ:ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನ ಮತ್ತು ಸೇವಾ ಭದ್ರತೆ ನೀಡಲು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶಾಸಕ ಭೀಮಣ್ಣ ನಾಯ್ಕಗೆ ಮನವಿ ಸಲ್ಲಿಸಲಾಯಿತು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈಗಾಗಲೇ ೧೦ ರಿಂದ ೨೦ ವರ್ಷಗಳವರೆಗೆ ಯೋಜನೆಯಲ್ಲಿ ಸಾಕಷ್ಟು ಸಿಬ್ಬಂದಿ ಸೇವೆ ಸಲ್ಲಿಸುತ್ತ ಬಂದಿದ್ದು ಅವರಿಗೆ ಬೇರೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮಿತಿ ಮೀರಿದ್ದು, ಅನಿವಾರ್ಯವಾಗಿ ಈ ಯೋಜನೆಯನ್ನೇ ಅವಲಂಬಿಸಿರುತ್ತಾರೆ. ಇವರ ಅನುಭವ ಮತ್ತು ಬೇರೆ ಉದ್ಯೋಗವನ್ನು ಪಡೆಯಲಾಗದ ಅಸಹಾಯಕತೆಯನ್ನು ಗಮನದಲ್ಲಿಟ್ಟುಕೊಂಡು ಇವರನ್ನು ಅನುಕಂಪದ ಆಧಾರದ ಮೇಲೆ ಈ ಯೋಜನೆಯಡಿ ಖಾಯಂಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು.
ಯೋಜನೆಯ ಸಫಲತೆಗಾಗಿ ತಳ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಬಾಕಿ ಇರುವ ಐದು ತಿಂಗಳ ವೇತನ ಪಾವತಿಸಲು ಅಗತ್ಯ ಅನುದಾನವನ್ನು ಕೇಂದ್ರ ಸರ್ಕಾರದಿಂದ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಸಕಾಲದಲ್ಲಿ ವೇತನ ಪಾವತಿಸಲು ಕಾಲಕಾಲಕ್ಕೆ ಅನುದಾನ ಬಿಡುಗಡೆಗೊಳಿಸಲು ಹಾಗೂ ಸಿಬ್ಬಂದಿಗೆ ಸೂಕ್ತ ಸೇವಾ ಭದ್ರತೆ ಒದಗಿಸಲು ತಾವು ನೌಕರರ ಬೇಡಿಕೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.ಮನವಿ ಸಲ್ಲಿಸುವ ವೇಳೆ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕಾರ್ತಿಕ್ ಹಬ್ಬು, ಶಿರಸಿ, ಸಿದ್ದಾಪುರ, ಹಳಿಯಾಳ ತಾಲೂಕಿನ ನರೇಗಾ ಸಿಬ್ಬಂದಿಗಳು ಇದ್ದರು.