ಕನ್ನಡಪ್ರಭ ವಾರ್ತೆ ಬೇಲೂರುತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಔಷಧಿ ಖರೀದಿಸಲು ಎರಡು ಕಿ. ಮೀ. ದೂರದ ನೆಹರೂ ನಗರದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರಿ ಆಸ್ಪತ್ರೆಯ ಸಮೀಪವೇ ಮತ್ತೆ ಔಷಧಿ ಕೇಂದ್ರ ತೆರೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಬಿಕ್ಕೋಡು ಗ್ರಾಮದ ನಿವಾಸಿ ಪುಟ್ಟೇಗೌಡ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕ ಜನರು ಗ್ರಾಮೀಣ ಭಾಗದವರು. ಆಸ್ಪತ್ರೆ ಸಮೀಪದಲ್ಲಿದ್ದ ಜನೌಷಧಿ ಕೇಂದ್ರವನ್ನು ದೂರಕ್ಕೆ ಸ್ಥಳಾಂತರಿಸಿರುವುದರಿಂದ ರೋಗಿಗಳು 100ರಿಂದ 150 ರುಪಾಯಿ ಆಟೋ ಬಾಡಿಗೆ ನೀಡಿ ಔಷಧಿ ಖರೀದಿಸಬೇಕಾಗಿದೆ. ಸರ್ಕಾರ ಜನರ ಅನುಕೂಲಕ್ಕಾಗಿ ಆರಂಭಿಸಿದ ಕೇಂದ್ರವೇ ಈಗ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಆಸ್ಪತ್ರೆ ಸಮೀಪದಲ್ಲೇ ಜನ ಔಷಧಿ ಕೇಂದ್ರವನ್ನು ಮರುಸ್ಥಾಪಿಸಬೇಕು ಎಂದು ಆಗ್ರಹಿಸಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಜಯ್ ಪ್ರತಿಕ್ರಿಯಿಸಿ "ಸರ್ಕಾರಿ ಆಸ್ಪತ್ರೆ ಕಟ್ಟಡದಲ್ಲೇ ಜನೌಷಧಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ವೇಳೆ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಔಷಧಿ ಮತ್ತು ಜನೌಷಧಿ ಕೇಂದ್ರದಲ್ಲಿ ಕಡಿಮೆ ದರಕ್ಕೆ ಮಾರಾಟವಾಗುವ ಔಷಧಿಗಳ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿತ್ತು. ಆಸ್ಪತ್ರೆಯಲ್ಲಿ ಔಷಧಿಗಳಿಗೆ ಹಣ ಪಡೆಯಲಾಗುತ್ತಿದೆ ಎಂಬ ತಪ್ಪು ಸಂದೇಶ ಹರಡುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು, ಆದರೆ ಆಸ್ಪತ್ರೆಯಿಂದ ದೂರಕ್ಕೆ ಸ್ಥಳಾಂತರವಾದ ಕಾರಣ ರೋಗಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಸಮೀಪದಲ್ಲೇ ಸೂಕ್ತ ಸ್ಥಳದಲ್ಲಿ ಜನೌಷಧಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಅನುಮತಿ ದೊರೆತ ತಕ್ಷಣ ಕೇಂದ್ರವನ್ನು ಆಸ್ಪತ್ರೆ ಸಮೀಪಕ್ಕೆ ಸ್ಥಳಾಂತರಿಸಲಾಗುವುದು " ಎಂದು ಹೇಳುತ್ತಾರೆ.