ಕನ್ನಡಪ್ರಭ ವಾರ್ತೆ ಹಿರಿಯೂರು

ರಾಜಕೀಯಕ್ಕೆ ಬರುವ ಮೊದಲಿಂದ ಇಲ್ಲಿಯವರೆಗೆ ಬಡವರಿಗೆ ದೀನದಲಿತರಿಗೆ ಮಹಿಳೆಯರಿಗೆ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುತ್ತಾ ರಾಜಕೀಯ ಬದುಕಿಗೆ ಭದ್ರ ಬುನಾದಿ ಹಾಕಿಕೊಂಡ ಅಪರೂಪದ ವ್ಯಕ್ತಿ ಡಿ ಸುಧಾಕರ್ ಆಗಿದ್ದರು ಎಂದು ವಿಶ್ರಾಂತ ಪ್ರಾಚಾರ್ಯ, ಜಾನಪದ ತಜ್ಞ ಡಾ.ಸಿ ಶಿವಲಿಂಗಪ್ಪ ಅಭಿಪ್ರಾಯಪಟ್ಟರು.

ನಗರದ ನೆಹರೂ ಮೈದಾನದಲ್ಲಿರುವ ವಾಣಿವಿಲಾಸ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ, ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಮಾಜಿ ಸಚಿವ ಡಿ ಸುಧಾಕರ್ ಹಾಗೂನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎನ್.ಶ್ರೀಪತಿ ಅವರಿಗೆ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಜಾತಿಯ ಸೋಂಕು ಇಲ್ಲದ ಡಿ ಸುಧಾಕರ್ ತಮ್ಮ ವ್ಯಕ್ತಿತ್ವ,ಸಾಮರ್ಥ್ಯ, ಕ್ರಿಯಾಶೀಲತೆ ಹಾಗೂ ಸ್ನೇಹ ಬಲದಿಂದ ರಾಜಕಾರಣಿಯಾಗಿ ಸತತ ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಗಳಾಗಿ ಆರೋಗ್ಯ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ನಗರ ಅಭಿವೃದ್ಧಿ ಪೌರ ಕಾರ್ಮಿಕರ ಕಲ್ಯಾಣ ಹೀಗೆ ಹಲವು ಕ್ಷೇತ್ರಗಳಲ್ಲಿ ಮಾಡಿದಂತ ಸೇವೆ ಇಂದಿಗೂ ತಾಲೂಕಿನ ಜನ ಮಾನಸದಲ್ಲಿ ಹಾಗೆ ಉಳಿದಿವೆ.ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಪ್ರಥಮ ರ್ಯಾoಕ್ ಪಡೆದ ವಿದ್ಯಾರ್ಥಿಗಳಿಗೆ ತಲಾ 75000 ರೂಪಾಯಿಗಳು ಹಾಗೂ ವಾಣಿ ಕಾಲೇಜು ವೇದಾವತಿ ಕಾಲೇಜುಗಳಲ್ಲಿ ಪ್ರಥಮ ರ್ಯಾoಕ್ ಪಡೆದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ರೂಪಾಯಿಗಳ ಬಹುಮಾನವನ್ನು ನೀಡಿ ವಿದ್ಯಾರ್ಥಿಗಳ ಬದುಕಿಗೆ ಪ್ರೋತ್ಸಾಹ ನೀಡುತ್ತಿದ್ದರು. ಪ್ರತಿ ವರ್ಷ ಕೋಟಿಗಟ್ಟಲೆ ಹಣದ ಸಹಾಯವನ್ನು ಬಡವರಿಗೆ ನಿರ್ಗತಿಕರಿಗೆ ಅಸಹಾಯಕರಿಗೆ ಮದುವೆ ಮುಂಜಿ ನಾಮಕರಣ ಹಬ್ಬ ಜಾತ್ರೆ ನಾಟಕ ಪ್ರದರ್ಶನ ಕೋಲಾಟ ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಮಾಡುತ್ತಿದ್ದರು.ಸುಧಾಕರ್ ರವರು ಮಾಡಿದ ಸಹಾಯವನ್ನು ತಾಲೂಕಿನ ಜನತೆ ಇಂದಿಗೂ ಮೆಲುಕು ಹಾಕುತ್ತಿದ್ದಾರೆ ಎಂದರು.

ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ ಡಾ.ಎಂ ಎನ್ ಶ್ರೀಪತಿಯವರು ವೈದ್ಯಾಧಿಕಾರಿಯಾಗಿ ಮೂಳೆತಜ್ಞರಾಗಿ ಕೆಲಸ ಮಾಡಿದ್ದು ಪ್ರವೃತ್ತಿಯಲ್ಲಿ ರೋಟರಿ ಲಯನ್ಸ್ ರೆಡ್ ಕ್ರಾಸ್ ಜಾನಪದ ಪರಿಷತ್ತು, ವೇದ ಪತ್ತಿನ ಸಹಕಾರ ಸಂಘ ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಇಂದಿಗೂ ಜನಮಾನಸದಲ್ಲಿ ಉಳಿದಿರುವುದು ಅವರು ಮಾಡಿದ ಸೇವೆಗೆ ಸಾಕ್ಷಿ ಪ್ರಜ್ಞೆಯಾಗಿದೆ ಎಂದರು.

ಡಿ.ಸುಧಾಕರ್ ಪುತ್ರ ಸುಹಾಸ್ ಸುಧಾಕರ್ ಅವರು ಡಿ.ಸುಧಾಕರ್ ಹಾಗೂ ಡಾ. ಎಂ.ಎನ್.ಶ್ರೀಪತಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ನಮ್ಮ ತಂದೆಯವರು ಈ ತಾಲೂಕಿನಲ್ಲಿ ಎರಡು ಬಾರಿ ಮಂತ್ರಿಗಳಾಗಿ ಮೂರು ಬಾರಿ ಶಾಸಕರಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರ ಸೇವೆಯ ಬದುಕನ್ನು ಸಾರ್ಥಕ ಗೊಳಿಸಲು ಪ್ರಯತ್ನಿಸಲಾಗುವುದು.ನಮ್ಮ ತಂದೆಗೆ ಕೊಟ್ಟಂತಹ ಪ್ರೀತಿ ಮಮತೆ,ಸಹಕಾರ ನಮಗೂ ಕೊಟ್ಟು ರಾಜಕೀಯ ಸೇವೆ ಮಾಡಲು ಅವಕಾಶ ಮಾಡಿಕೊಡಿ.ನಿಮ್ಮೆಲ್ಲರ ಪ್ರೀತಿಯ ವಿಶ್ವಾಸದಲ್ಲಿ ಈ ತಾಲೂಕಿನ ಅಭಿವೃದ್ಧಿಗೆ ಸದಾ ದುಡಿಯುತ್ತೇನೆ ಎಂದರು.


ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಮದ್ ಫಕ್ರುದ್ದೀನ್, ಆಲೂರು ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಈ. ಮಂಜುನಾಥ್,ಯುವ ಮುಖಂಡ ಎಸ್. ಗೌತಮ್, ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ,ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ. ನಿಜಲಿಂಗಪ್ಪ, ಸಂಗೀತ ವಿದ್ವಾನ್ ಆರ್ ತಿಪ್ಪೇಸ್ವಾಮಿ, ಎಚ್,ಎಸ್ ,ಚಂದ್ರವದನ, ಟಿ, ಸುಲೋಚನ ,ಎಲ್, ಆನಂದ ಶೆಟ್ಟಿ, ಎಂ.ಬಿ. ಲಿಂಗಪ್ಪ, ದೇವರಾಜ್ ಮೂರ್ತಿ, ಬಿಕೆ ನಾಗಣ್ಣ, ಗಡಾರಿ ಕೃಷ್ಣಪ್ಪ, ವಿ,ಸಿದ್ದಪ್ಪ, ಸರೋಜಮ್ಮ ,ಜಯಲಕ್ಷ್ಮಿ ರಾಧಿಕಾ ಮುಂತಾದವರು ಹಾಜರಿದ್ದರು.