ಶಿಗ್ಗಾಂವಿ: ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಹಕ್ಕು ಪತ್ರ ನೀಡಲಾಗಿರುವ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ಕೂಡಲೇ ಆ ಜಾಗದಿಂದ ತೆರವುಗೊಳಿಸಿ ದಲಿತರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಹಾವೇರಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಾಲೂಕು ತಹಸೀಲ್ದಾರ್ ಮೂಲಕ ಮನವಿ ಅರ್ಪಿಸಲಾಯಿತು. ಹುಣಸಿಕಟ್ಟಿ ಗ್ರಾಮದ ರಿ.ಸ.ನಂ.೪೯/೧,೪೯/೨,೪೯/೩ ಸರ್ವೇ ನಂಬರ್‌ನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರದಿಂದ ಅಧಿಕೃತವಾಗಿ ಹಕ್ಕು ಪತ್ರವನ್ನೂ ನೀಡಲಾಗಿದೆ. ಸುಮಾರು ವರ್ಷ ಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಆದರೆ ಇತ್ತೀಚಿಗೆ ಕೆಲವರು ಆ ಜಮೀನಿನಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಮನೆಗಳಿಗೆ ಕೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದಿಂದ ಹಕ್ಕುಪತ್ರವನ್ನು ಪಡೆಯುವ ಹುನ್ನಾರ ನಡದಿದೆ. ಕೂಡಲೇ ಅವರನ್ನು ತೆರವುಗೊಳಿಸಬೇಕು. ಒಂದು ವೇಳೆ ದಲಿತರಿಗೆ ಅನ್ಯಾಯ ಆದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಉಗ್ರವಾದ ಹೋರಾಟವನ್ನು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.