ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ಕಾಯ್ದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿ ನ.4ರಂದು ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಭಾರತೀಯ ಕಿಸಾನ ಸಂಘ ನೇತೃತ್ವದ ಪ್ರತಿಭಟನೆಗೆ ಬಿಜೆಪಿ ಬೆಂಬಲಿಸಿ, ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕುಚಬಾಳ ಹೇಳಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಭಟನೆ ಮೂಲಕ ವಕ್ಫ್ ವಿರುದ್ಧ ಜನಜಾಗೃತಿ ಮೂಡಿಸಲಾಗುವುದು. ಜತೆಗೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡಲಾಗುವುದು. ಈ ಹೋರಾಟದಲ್ಲಿ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಶ್ರೀಗಳು ಭಾಗವಹಿಸಲಿದ್ದಾರೆ ಎಂದರು.
ಸಿಎಂ ಸಿದ್ಧರಾಮಯ್ಯನವರ ಸೂಚನೆ ಮೇರೆಗೆ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾಲತ್ ಮಾಡಿರುವುದಾಗಿ ಹೇಳಿದ್ದಾರೆ. ಪರಿಣಾಮ ಕಳೆದ ಒಂದು ತಿಂಗಳಲ್ಲಿ ರೈತರು, ಮಠಗಳ ಪ್ರಮುಖರು ಸಹ ಭಯಭೀತರಾಗಿದ್ದಾರೆ. ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಾಜ್ಯ ಬಿಜೆಪಿಯ ತಂಡ ಕೂಡ ಬಂದಿದೆ. ಜಿಲ್ಲೆಯ ಸಿಂದಗಿ, ಯರಗಲ್ ಬಿಕೆ, ಪಡಗಾನೂರ, ಹಡಗಲಿ ಸೇರಿದಂತೆ ಎಲ್ಲೆಡೆ ವಕ್ಫ್ ವ್ಯಾಪಿಸಿದೆ ಎಂದರು.ನೋಟಿಸ್ ವಾಪಸ್ ಪಡೆಯುವುದಾಗಿ ಸಿಎಂ ಹೇಳುತ್ತಿದ್ದಾರೆ. ವಕ್ಫ್ ಕಾಯ್ದೆಯಲ್ಲಿ 1974ರ ಗಜೆಟ್ ಸಂಪೂರ್ಣ ರದ್ದಾಗಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ವಕ್ಫ್ ಸಮಸ್ಯೆಯ ಮೂಲವೇ 1974ರ ಗೆಜೆಟ್. ಅರ್ಧ ಶತಮಾನದ ಹಿಂದಿನ ಆದೇಶ ಇಟ್ಟುಕೊಂಡು ಈಗ ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದಾರೆ. ಇಷ್ಟು ವರ್ಷ ಇವರು ದನ ಕಾಯ್ದರಾ?. ಈಗ ಜಾರಿಗೆ ತರಲು ಹೊರಟಿರುವ ಹಿಂದಿನ ದುರುದ್ಧೇಶವೇನು?. ಮುಖ್ಯಮಂತ್ರಿಗಳು ಪಟ್ಟಭದ್ರರ ಆಸ್ತಿ ಕೊಳ್ಳೆ ಹೊಡೆಯುವುದನ್ನು ತಪ್ಪಿಸಬೇಕು. ಈ ಪ್ರಕರಣವನ್ನು ಸಿಬಿಐಗೆ ಒಹಿಸುವಂತೆ ಒತ್ತಾಯಿಸಿದರು.ಕೇಂದ್ರದಲ್ಲಿ 1995ರ ಕಾಯ್ದೆ ತಿದ್ದುಪಡಿಗೆ ಮುಂದಾಗಿದ್ದರಿಂದ ಈಗ ರಾಜ್ಯದಲ್ಲಿ ದುರುದ್ದೇಶದ ಕೆಲಸ ನಡೆಯುತ್ತಿದೆ. ಮುಸ್ಲಿಂರನ್ನು ದಾರಿತಪ್ಪಿಸಿ ಕಾಂಗ್ರೆಸ್ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ್, ಮುಖಂಡರಾದ ವಿಜುಗೌಡ ಪಾಟೀಲ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಉಪಸ್ಥಿತರಿದ್ದರು.