ಕನ್ನಡಪ್ರಭ ವಾರ್ತೆ ಹಾಸನ
ಬೇಲೂರು ತಾಲೂಕಿನ ಚನ್ನಾಪುರ ಗಡಿಯಿಂದ ಹಲ್ಮಿಡಿ ಮಾರ್ಗವಾಗಿ ದಾಸಗೋಡನಹಳ್ಳಿವರೆಗೂ 8 ಕಿ.ಮೀ. ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಕಳಪೆ ಆಗಿಲ್ಲ ಎಂದು ಶಾಸಕರು ಸಾಬೀತುಪಡಿಸಿದರೆ ನಾವು ಸಾಮೂಹಿಕವಾಗಿ ನಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ. ಕಳಪೆ ಕಾಮಗಾರಿ ಎಂದು ಸಾಬೀತಾದರೆ ಶಾಸಕರು ರಾಜೀನಾಮೆ ಕೊಡಬೇಕೆಂದು ಬೇಲೂರು ತಾಪಂ ಕೆಡಿಪಿ ಸದಸ್ಯ ಕೆ.ಎಸ್. ನವೀನ್ ಮತ್ತು ಚೇತನ್ ಗೌಡ ಸವಾಲು ಹಾಕಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಬೇಲೂರು ಪಿ.ಡಬ್ಲ್ಯೂ.ಡಿ ಇಲಾಖೆಯಿಂದ ಬೇಲೂರು- ಚಿಕ್ಕಮಗಳೂರು ಹೆದ್ದಾರಿಯನ್ನು ಸಂಪರ್ಕಿಸುವ ಬೇಲೂರು ತಾಲೂಕಿನ ಚನ್ನಾಪುರ ಗಡಿಯಿಂದ ಹಲ್ಮಿಡಿ ಮಾರ್ಗವಾಗಿ ದಾಸಗೋಡನಹಳ್ಳಿವರೆಗೆ ೮ ಕಿಮೀ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿಯನ್ನು ೨೦೨೪ನೇ ಅಕ್ಟೋಬರ್ ತಿಂಗಳಲ್ಲಿ ಪ್ರಾರಂಭಿಸಿ, ೬ ಕೋಟಿ ರು.ಗಳ ವೆಚ್ಚದ ಈ ಕಾಮಗಾರಿಯನ್ನು ಎರಡು ಹಂತಗಳಲ್ಲಿ ನಡೆಸಿ, ೨೦೨೫ನೇ ಏಪ್ರಿಲ್ ತಿಂಗಳಿನಲ್ಲಿ ಪೂರ್ಣಗೊಳಿಸಿದ್ದಾರೆ. ಈ ರಸ್ತೆ ನಿರ್ಮಿಸಿ ಕೇವಲ ೩ ತಿಂಗಳಲ್ಲಿಯೇ ಅಲ್ಲಲ್ಲಿ ರಸ್ತೆಯು ಬಿರುಕು ಬಿಟ್ಟಿದ್ದು, ಗುಂಡಿ ಬಿದ್ದಿದೆ. ರಸ್ತೆಯ ಇಕ್ಕೆಲಗಳಲ್ಲಿ ಡಾಂಬರು ಕಿತ್ತುಹೋಗಿದೆ. ನಿಯಮಾನುಸಾರ ರಸ್ತೆಯ ಇಕ್ಕೆಲಗಳಲ್ಲಿ ಗ್ರಾವೆಲ್ ಮಣ್ಣನ್ನು ಹಾಕುವುದರ ಬದಲಿಗೆ ಅಂಟುವ ಜೇಡಿ ಮಣ್ಣನ್ನು ಹಾಕಿದ್ದಾರೆ. ಇದರಿಂದ ವಾಹನಗಳು ರಸ್ತೆಯ ಅಂಚಿಗೆ ಇಳಿದರೆ ಜಾರುವ ಪರಿಸ್ಥಿತಿ ಉಂಟಾಗಿ ಅವಘಡಗಳು ಸಂಭವಿಸಲು ಕಾರಣವಾಗಿದೆ ಎಂದು ದೂರಿದರು. ಈ ೮ ಕಿ.ಮೀ. ರಸ್ತೆ ವ್ಯಾಪ್ತಿಯಲ್ಲಿ ೧೪ ಗ್ರಾಮಗಳಿದ್ದು, ಇಂತಹ ಕಳಪೆ ರಸ್ತೆ ಡಾಂಬರೀಕರಣ ನಡೆಸಿರುವ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ನೀಡಿರುವ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಹೋಗಿ ರಸ್ತೆ ಡಾಂಬರೀಕರಣದ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದಾಗ ಗ್ರಾಮಸ್ಥರ ಆಪಾದನೆಯಂತೆ ರಸ್ತೆಯಲ್ಲಿ ಬಿರುಕು ಮತ್ತು ಗುಂಡಿಗಳು ಸಾಮಾನ್ಯವಾಗಿ ಕಂಡುಬಂದಿವೆ ಎಂದರು.
ಈ ಕಾಮಗಾರಿಯ ಅಂದಾಜು ಪಟ್ಟಿಯ ಪ್ರಕಾರ ೮ ಇಂಚು ವೆಟ್ ಮಿಕ್ಸ್ ಅಳವಡಿಸಬೇಕಾಗಿದ್ದು, ಆದರೆ ಕೇವಲ ೩ ಇಂಚು ವೆಟ್ ಮಿಕ್ಸ್ ಕೂಡ ಹಾಕಿಲ್ಲ ಎಂದರು. ನಂತರ ನಾನು ಬೇಲೂರು ಪಿ.ಡಬ್ಲ್ಯೂ.ಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಿಂದ ಈ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದುಕೊಂಡಿದ್ದೇನೆ ಎಂದು ಹೇಳಿದರು.ಈ ರಸ್ತೆ ಕಾಮಗಾರಿಯನ್ನು ಹಾವೇರಿಯ ರಾಜಾಸಾಬ್ ಎಂಬ ಗುತ್ತಿಗೆದಾರರು ನಡೆಸಿದ್ದಾರೆ. ರಸ್ತೆಯ ಎರಡನೇ ಹಂತದಲ್ಲಿ ಹೊಂಡ ತೋಟದಿಂದ ದಾಸಗೋಡನಹಳ್ಳಿವರೆಗೆ ೫. ೫ ಕಿಮೀ ಡಾಂಬರೀಕರಣ ಕಾಮಗಾರಿಯನ್ನು ೪ ಕೋಟಿ ರು.ಗಳ ವೆಚ್ಚದಲ್ಲಿ ಮಾಡಲಾಗಿದೆ. ಈ ಕಾಮಗಾರಿಯನ್ನು ಹಾಸನದ ಹೇಮಂತ್ ಎಂಬ ಗುತ್ತಿಗೆದಾರರು ನಡೆಸಿದ್ದಾರೆ. ೬ ಕೋಟಿ ರು. ವೆಚ್ಚದ ಈ ೮ ಕಿ.ಮೀ ರಸ್ತೆಯ ಡಾಂಬರೀಕರಣ ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸಲು ಬೇಲೂರು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ರಸ್ತೆಯ ಕಳಪೆ ಕಾಮಗಾರಿಯನ್ನು ಕಂಡರೆ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದು ತಿಳಿಯುತ್ತದೆ ಎಂದು ಅನುಮಾನಿಸಿದರು.
ಬೇಲೂರು ಪಿಡಬ್ಲ್ಯೂಡಿ ಇಲಾಖೆಯ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಸೇರಿಕೊಂಡು ೬ ಕೋಟಿ ರು. ವೆಚ್ಚದಲ್ಲಿ ನಡೆಸಿರುವ ಡಾಂಬರೀಕರಣವನ್ನು ಕಳಪೆಯಾಗಿ ನಿರ್ವಹಿಸಿ ಹೆಚ್ಚಿನ ಮಟ್ಟದಲ್ಲಿ ಅಕ್ರಮ ಲಾಭ ಗಳಿಸುವ ಮೂಲಕ ಸರ್ಕಾರಕ್ಕೆ ವಂಚಿಸಿದ್ದಾರೆ. ಈ ಕಳಪೆ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ನಿರ್ವಹಿಸಿರುವ ಬೇಲೂರು ಉಪವಿಭಾಗದ ಪಿಡಬ್ಲ್ಯೂಡಿ ಇಲಾಖೆಯ ದಯಾನಂದ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಈಗ ವರ್ಗಾವಣೆಯಾಗಿ ಹಾಲಿ ಬೇಲೂರಿನ ಯಗಚಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ) ಕೃಷ್ಣ ಗೌಡ, ಈಗಿನ ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೇಸ್ ವರ್ಕರ್ ಆದ ಸೋಮಶೇಖರ್, ಸಹಾಯಕ ಎಂಜಿನಿಯರ್ ಸೋಮಶೇಖರ್, ಜೂನಿಯರ್ ಎಂಜಿನಿಯರ್, ಗುತ್ತಿಗೆದಾರರ ವಿರುದ್ಧ ತನಿಖೆ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಸುಹುಲ್ ಪಾಷಾ, ಗ್ರಾಮ ಪಂಚಾಯಿತಿ ಸದಸ್ಯ ವೀರುಪಾಕ್ಷ, ಕೆಡಿಪಿ ಸದಸ್ಯೆ ಜ್ಯೋತಿ ಇತರರು ಉಪಸ್ಥಿತರಿದ್ದರು.
-------