ಕುಷ್ಟಗಿ: ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟಕ್ಕೆ ನಿಗದಿಪಡಿಸಿರುವ ಆಹಾರ ಪದಾರ್ಥಗಳ ದರ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು, ಶಿಕ್ಷಕರ ಬಾಕಿ ಇರುವ ವೈದ್ಯಕೀಯ ಬಿಲ್ಲು ತುರ್ತಾಗಿ ಅನುಮೋದಿಸಿ, ಮರುಪಾವತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ತಾಪಂ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಸಿಯೂಟ ಯೋಜನೆಗೆ ಅಗತ್ಯವಿರುವ ಸಾಂಬಾರು ಪದಾರ್ಥ, ಸಕ್ಕರೆ, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳ ಬೆಲೆ ಕಳೆದ ಅವಧಿಯಲ್ಲಿ ಗಣನೀಯ ಹೆಚ್ಚಾಗಿದ್ದು ಶಾಲೆಗಳಲ್ಲಿ ಬಿಸಿಯೂಟ ನಿರ್ವಹಿಸುವ ಶಿಕ್ಷಕರು, ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ, ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಮಾರುಕಟ್ಟೆ ದರ ಆಧರಿಸಿ ಎಲ್ಲ ಆಹಾರ ಪದಾರ್ಥಗಳಿಗೂ ಸೂಕ್ತ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಶಿವಪ್ಪ ವಾಗ್ಮೊರೆ ಮಾತನಾಡಿ, ತಾಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಗೆ ಚಿಕಿತ್ಸೆ ಪಡೆದು ಸಲ್ಲಿಸಿರುವ ವೈದ್ಯಕೀಯ ಬಿಲ್ಲು ಕಚೇರಿಯಲ್ಲಿ ಬಾಕಿ ಉಳಿದಿವೆ. ಹಲವು ಶಿಕ್ಷಕರು ವೈದ್ಯಕೀಯ ವೆಚ್ಚ ಸ್ವಂತ ಹಣದಿಂದ ಭರಿಸಿದ್ದು, ಮರುಪಾವತಿಗಾಗಿ ಬಿಲ್ಲು ಸಲ್ಲಿಸಿದ್ದಾರೆ. ಬಾಕಿ ಇರುವ ಎಲ್ಲ ವೈದ್ಯಕೀಯ ಬಿಲ್ಲು ತ್ವರಿತವಾಗಿ ಪರಿಶೀಲಿಸಿ, ಅನುಮೋದನೆ ನೀಡಿ ಶಿಕ್ಷಕರಿಗೆ ಮರುಪಾವತಿ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದರು.ಶಿಕ್ಷಕರಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚದ ಮರುಪಾವತಿ ವಿಳಂಬವಾಗುವುದರಿಂದ ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ಶಿಕ್ಷಕರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ, ಬಾಕಿ ಇರುವ ಬಿಲ್ಲು ಆದ್ಯತೆಯ ಮೇರೆಗೆ ವಿಲೇವಾರಿ ಮಾಡುವಂತೆ ಒತ್ತಾಯಿಸಿದರು.