ಯಲ್ಲಾಪುರ ಪಟ್ಟಣದ ಮೌನ ಗ್ರಂಥಾಲಯದಲ್ಲಿ ಭಾನುವಾರ ಯಕ್ಷಗಾನದ ಹಾಸ್ಯ ಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.
ಯಲ್ಲಾಪುರ: ಅದ್ಭುತ ಲಯ, ಪ್ರಸಂಗದ ಮೇಲೆ ಹಿಡಿತ, ಹೊಸತನ ಹೊಂದಿದ್ದ, ಸಾವಿರಾರು ಜನರನ್ನು ರಂಗದಲ್ಲಿ ನಗಿಸುತ್ತ, ಬೇರೆಯವರ ಸಂತೋಷಕ್ಕೆ ಕಾಸರಕೋಡ ಕಾರಣರಾಗಿದ್ದರು ಎಂದು ಯಕ್ಷಗಾನ ಅರ್ಥಧಾರಿ ಎಂ.ಎನ್. ಹೆಗಡೆ ಹಳವಳ್ಳಿ ಹೇಳಿದರು.
ಪಟ್ಟಣದ ಮೌನ ಗ್ರಂಥಾಲಯದಲ್ಲಿ ಭಾನುವಾರ ನಡೆದ ಯಕ್ಷಗಾನದ ಹಾಸ್ಯಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರೇಕ್ಷಕರು ಮುಜುಗುರ ಪಡುವಂತಹ ಹಾಸ್ಯ ಮಾಡದೇ ಗೌರವಯುತ ಹಾಸ್ಯದ ಮೂಲಕ ಜನರನ್ನು ರಂಜಿಸಿದ್ದರು ಎಂದು ಹೇಳಿದರು.
ಹಿರಿಯ ಅರ್ಥಧಾರಿ ಸಿ.ಜಿ. ಹೆಗಡೆ ಮಾತನಾಡಿ, ದ್ವಂದ್ವಾರ್ಥ, ಅಶ್ಲೀಲ ಹಾಸ್ಯದ ಮೂಲಕ ಜನರಂಜಿಸುವವರೇ ಹೆಚ್ಚಿರುವ ಸಂದರ್ಭದಲ್ಲಿ, ಅಶ್ಲೀಲವಲ್ಲದ ರಾಜ ಹಾಸ್ಯದ ಮೂಲಕ ಜನರನ್ನು ಶಿಷ್ಟವಾಗಿ, ವಿಶಿಷ್ಟವಾಗಿ ನಗಿಸುವುದರಲ್ಲಿ ಕಾಸರಕೋಡ ನಿಸ್ಸೀಮರಾಗಿದ್ದರು. ಅವರ ಆಕಸ್ಮಿಕ ಅಕಾಲಿಕ ಮರಣ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ತಾಲೂಕು ಹವ್ಯಕ ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ಮಾತನಾಡಿ, ನವರಸದಲ್ಲಿ ಹಾಸ್ಯ ಪ್ರಧಾನ. ಅದರಲ್ಲೂ ರಾಜಹಾಸ್ಯ ಹೇಗೆ ಎನ್ನುವುದನ್ನು ರಂಗದಲ್ಲಿ ಕಾಸರಕೋಡ ತೋರಿಸಿಕೊಟ್ಟಿದ್ದರು ಎಂದರು.
ಮಾತೆಯರು ಭಗವದ್ಗೀತೆಯ ೧೫ನೇ ಅಧ್ಯಾಯ ಪಠಿಸಿ, ಶ್ರದ್ಧಾಂಜಲಿ ಸಲ್ಲಿಸಿದರು. ಕಲಾಭಿಮಾನಿಗಳು ಕಾಸರಕೋಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ನುಡಿನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಕಲಾವಿದ ಸತೀಶ ಹೆಗಡೆ, ಯುಕೆ ಬ್ಯಾಂಕ್ ಸಲಹೆಗಾರ ಪಿ.ಜಿ. ಹೆಗಡೆ ಕಳಚೆ, ಪತ್ರಕರ್ತರಾದ ಸುಬ್ರಾಯ ಬಿದ್ರೆಮನೆ, ಶ್ರೀಧರ ಅಣಲಗಾರ, ಕೆ.ಎಸ್. ಭಟ್ಟ ಆನಗೋಡ, ಪ್ರಮುಖರಾದ ನರಸಿಂಹ ಭಟ್ಟ ತಾಳಗುಪ್ಪ, ಶಿವಾನಂದ ಹೆಗಡೆ ಕೊಂಡದಕುಳಿ, ಶ್ರೀಶ ಹೆಗಡೆ, ಗುರು ಭಟ್ಟ ಜಂಬೆಸಾಲ್, ಎಂ.ಎಸ್. ಹೆಗಡೆ, ಪ್ರಶಾಂತ ಹೆಗಡೆ ಇತರರು ನಮನ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.