ಗದ್ದೆಗೆ ರಸ್ತೆ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿ ಸೋಮವಾರ ಮುಂಡಗೋಡ ತಾಲೂಕಿನ ಇಂದೂರ ಭಾಗದ ರೈತರು ವಿಷದ ಬಾಟಲಿ ಹಿಡಿದುಕೊಂಡು ಪಟ್ಟಣದ ಚಿಕ್ಕ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು.
ಮುಂಡಗೋಡ: ಗದ್ದೆಗೆ ರಸ್ತೆ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿ ಸೋಮವಾರ ಇಂದೂರ ಭಾಗದ ರೈತರು ವಿಷದ ಬಾಟಲಿ ಹಿಡಿದುಕೊಂಡು ಪಟ್ಟಣದ ಚಿಕ್ಕ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು.
ತಾಲೂಕಿನ ಇಂದೂರ ಗ್ರಾಮ ಸ.ನಂ. ೨೦೩ರಿಂದ ೨೦೭ರಲ್ಲಿ ಬಾಚಣಕಿ ಜಲಾಶಯ ಕಾಲುವೆ ಹಾಗೂ ರಸ್ತೆ ಒತ್ತುವರಿ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಗದ್ದೆಗಳಿಗೆ ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಗದ್ದೆಯಲ್ಲಿ ಬೆಳೆದ ಪಪ್ಪಾಯಿ ಮುಂತಾದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ಅಲ್ಲಿಯೇ ಒಣಗಿ ಹೋಗುತ್ತಿದೆ. ಲಕ್ಷಾಂತರ ರುಪಾಯಿ ಹಾನಿ ಅನುಭವಿಸುವಂತಾಗಿದೆ. ರಸ್ತೆಯನ್ನು ಕೆಲವರು ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ ರೈತರು, ಅತಿಕ್ರಮಣ ತೆರವುಗೊಳಿಸಿ ರಸ್ತೆ ವ್ಯವಸ್ಥೆ ಮಾಡಿಕೊಡುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಬಳಿಕ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಎಸ್.ಎ. ಪ್ರಸಾದ ಈ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಈ ಪ್ರಕರಣ ನ್ಯಾಯಾಲಯದಲ್ಲಿರುವುದು ಬೆಳಕಿಗೆ ಬಂತು. ಅಲ್ಲದೇ ಆ. ೭ರಂದು ನ್ಯಾಯಾಲಯದಲ್ಲಿ ಈ ಬಗ್ಗೆ ವಿಚಾರಣೆ ಇದ್ದು, ಅಲ್ಲಿವರೆಗೆ ಕಾಯಿರಿ, ಆ ಬಳಿಕ ಅಗತ್ಯ ಕ್ರಮ ಕೈಗೊಂಡು ರಸ್ತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.