- ರಸ್ತೆ ಅಗಲೀಕರಣಕ್ಕೂ ಮುನ್ನ ಒಂದೇ ಕಂತಿನಲ್ಲಿ ಕಾನೂನು ಬದ್ಧವಾಗಿ ಪರಿಹಾರಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಟ್ಟಣದ ರಸ್ತೆ ಅಗಲೀಕರಣದಲ್ಲಿ 60 ಅಡಿ ಬದಲಿಗೆ 38 ಅಡಿ ಮಾತ್ರ ರಸ್ತೆ ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿ ರಸ್ತೆ ಅಗಲೀಕರಣ ವ್ಯಾಪ್ತಿಗೆ ಒಳಪಡುವ 56 ಸಹಿ ಇರುವ ಮನವಿ ಪತ್ರವನ್ನು ಖಾತೆದಾರರು ಗುರುವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದರು.
ಮನವಿಯಲ್ಲಿ, ಪ್ರವಾಸಿ ಮಂದಿರ ಸರ್ಕಲ್ ನಿಂದ ಬಸ್ ನಿಲ್ದಾಣದವರೆಗೆ ಉದ್ದೇಶಿತ ರಸ್ತೆ ಅಗಲೀಕರಣದ ಬಗ್ಗೆ ಖಾತೆದಾರರ ಸಭೆಯಲ್ಲಿ ನಮಗೆ ಮಾಹಿತಿ ನೀಡಲಾಗಿತ್ತು. ಆ ಸಭೆಯಲ್ಲಿ ಪರಿಹಾರದ ಬಗ್ಗೆ ಯಾವುದೇ ಸೃಷ್ಟವಾದ ಲಿಖಿತ ಮಾಹಿತಿ ಇರಲಿಲ್ಲ. ರಸ್ತೆ ಅಗಲೀಕರಣ ನಂತರ ಉಳಿದಿರುವ ಜಾಗದಲ್ಲಿ ವಾಸಿಸಲು ಸಾಧ್ಯವಾಗದವರಿಗೆ ಬದಲಿ ನಿವೇಶನ ಹಾಗೂ ಬದಲಿ ವ್ಯವಸ್ಥೆ ಕುರಿತು ಸಹ ಯಾವುದೇ ಮಾಹಿತಿ ನೀಡಲಿಲ್ಲ. ಯಾವುದೇ ಮನ್ಸೂಚನೆ ಇಲ್ಲದೆ ಅಧಿಕಾರಿಗಳು ರಸ್ತೆ ಮದ್ಯ ಭಾಗದಿಂದ ಎರಡೂ ಬದಿ 30 ಅಡಿಯಂತೆ ಒಟ್ಟು 60 ಅಡಿ ರಸ್ತೆ ಅಗಲಿಕೀರಣಕ್ಕೆ ಗುರುತು ಮಾಡಿದ್ದಾರೆ. ಖಾತೆದಾರರ ಸಭೆಯಲ್ಲೇ 60 ಅಡಿ ಅಗಲಕ್ಕೆ ಅಕ್ಷೇಪಣೆ ಮಾಡಿದ್ದೇವೆ. ಪರಿಹಾರದ ಬಗ್ಗೆಯೂ ಸೃಷ್ಟ ಮಾಹಿತಿ ನೀಡದೆ ಅಳತೆ ಮಾಡಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ರಸ್ತೆ ಅಗಲೀಕರಣಕ್ಕೆ ನಮ್ಮ ಆಕ್ಷೇಪವಿಲ್ಲ. ರಸ್ತೆ ಅಗಲೀಕರಣ ಮಾಡಿದರೆ ಒಂದೇ ಕಂತಿನಲ್ಲಿ ಖಾತೆದಾರರಿಗೆ ಪರಿಹಾರ ನೀಡಬೇಕು. 60 ಅಡಿ ರಸ್ತೆ ಅಗತ್ಯವಿಲ್ಲ. 38 ಅಡಿ ಮಾತ್ರ ರಸ್ತೆ ವಿಸ್ತರಣೆ ಮಾಡಿದರೆ ಈಗ ಇರುವ ರಸ್ತೆ 2 ಪಟ್ಟಿನಷ್ಟು ಅಗಲವಾಗುತ್ತದೆ. ಇದರಲ್ಲೇ ವಾಹನ ನಿಲುಗಡೆ, ಚರಂಡಿ, ವಿದ್ಯುತ್ ಕಂಬಕ್ಕೆ ಬೇಕಾದ ಸ್ಥಳವಕಾಶ ಸಿಗಲಿದೆ ಎಂದಿದ್ದಾರೆ.ಹೆಚ್ಚಿನ ಖಾತೆದಾರರು ಜಂಟಿ ಗೋಡೆಗಳ ಹಿಂದಿನ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. ಒಂದು ಭಾಗದಲ್ಲಿ ಗೋಡೆ ತೆಗೆದರೆ ಉಳಿದ ಭಾಗಗಳ ಸುರಕ್ಷಿತವಲ್ಲ. ಬಿದ್ದು ಹೋಗುವ ಮನೆಗಳನ್ನು ಮತ್ತೆ ಕಟ್ಟಿಕೊಳ್ಳಲು ಬಹುತೇಕರಿಗೆ ಸಾಧ್ಯವಿಲ್ಲ. ಆದ್ದರಿಂದ ಕಾಮಗಾರಿ ಆರಂಭಕ್ಕೆ ಮುನ್ನವೇ ಕಾನೂನು ಬದ್ದವಾಗಿ ಪರಿಹಾರ ನೀಡಬೇಕು ಆಗ್ರಹಿಸಿದ್ದಾರೆ.
ಮನವಿ ಪತ್ರವನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ನೀಡಿದರು. ಮನವಿ ನೀಡುವ ಸಂದರ್ಭದಲ್ಲಿ ಖಾತೆದಾರ ರಾದ ಡಾ.ಶಿವಕುಮಾರ್, ಕೆ.ವಿ.ವಿಜಯಕುಮಾರ್, ಮಂಜುನಾಥ್, ರೇವಣ್ಣ, ಅರುಣಕುಮಾರ್ ಜೈನ್, ಎನ್.ಆರ್ ಸತ್ಯನಾರಾಯಣ ಶ್ರೇಷ್ಠಿ, ಎನ್.ಎಸ್. ಅಜೇಯ್, ಡಿ.ಟಿ.ಸಂದೇಶ್ ಇದ್ದರು.