ಕಾಲ್ತುಳಿತ ಪ್ರಕರಣದಲ್ಲಿ ಮೃತರ ಕುಟುಂಬಕ್ಕೆ ತಲಾ 5 ಕೋಟಿ ಪರಿಹಾರಕ್ಕೆ ಆಗ್ರಹ

KannadaprabhaNewsNetwork |  
Published : Jun 22, 2025, 01:18 AM IST
21ಕೆಆರ್ ಎಂಎನ್ 7.ಜೆಪಿಜಿರಾಮನಗರ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸಿದ್ದರಾಮಯ್ಯರವರ ಸಚಿವ ಸಂಪುಟದಲ್ಲಿ ಅನೇಕ ಸಚಿವರು ಪಾಳೇಗಾರರಂತೆ ಇದ್ದಾರೆ. ಅವರ ಒತ್ತಡ ಮುಖ್ಯಮಂತ್ರಿಗಳ ಮೇಲೆ ಹೆಚ್ಚಾಗಿದೆ. ಕಾಲ್ತುಳಿತ ಪ್ರಕರಣವನ್ನು ಪ್ರಶ್ನಿಸಬೇಕಾದ ವಿ.ಪಕ್ಷ ಕೂಡ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಕೋಟಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಬೆಂಗಳೂರು- ಮೈಸೂರು ಹಳೇ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ಕಾರ್ಯಕರ್ತರು, ಕಾಲ್ತುಳಿತ ಪ್ರಕರಣವನ್ನು ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆಗೆ ವಹಿಸಬೇಕು. ಆರ್ ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ರಾಜ್ಯ ಸರ್ಕಾರ ಮೃತರ ಕುಟುಂಬದವರಿಗೆ ತಲಾ 5 ಕೋಟಿ ಪರಿಹಾರ ನೀಡಲೇ ಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್ , ರಾಜ್ಯದಲ್ಲಿ ಎಂದೂ ಆಗದಂತಹ ಕಾಲ್ತುಳಿತ ದುರಂತ ಸಂಭವಿಸಿದೆ. ಇದಕ್ಕೆ ಕಾರಣ ಯಾರು ಎಂಬುದು ಗೌಪ್ಯವಾಗಿ ಉಳಿದಿದೆ. ಸರ್ಕಾರ 20 ದಿನಗಳಾದರೂ ತಪ್ಪಿತಸ್ಥರು ಯಾರೆಂದು ಹೇಳಿಲ್ಲ. ಸತ್ತವರ ಮನೆಯವರ ಪರಿಸ್ಥಿತಿ ಕಣ್ಣೀರಿನ ಕಥೆಯಾಗಿದೆ. ಘಟನೆ ಕುರಿತು ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತಿದ್ದು, ಅವರು ನೊಂದವರ ಮನೆಗೆ ಹೋಗುತ್ತಿಲ್ಲ. ಬದಲಿಗೆ ನೊಂದವರೇ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಬಂದು ಅಧಿಕಾರಿಗಳು ಕೇಳುವ ಪ್ರಶ್ನೆಗೆ ಉತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಪ್ರಕರಣದ ತನಿಖೆಗೆ ಜಿಲ್ಲಾಧಿಕಾರಿಗಳ ನೇಮಕವೇ ಸರಿ ಇಲ್ಲ. ಈ ಕೂಡಲೇ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಪೊಲೀಸ್ ಕಮಿಷನರ್ ಹಾಗೂ ಅಧಿಕಾರಿಗಳನ್ನು ಅಮಾನತ್ತಿನಲ್ಲಿ ಇಟ್ಟಿದ್ದಾರೆ. ಆ ಅಧಿಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದೆ. ವಿಧಾನಸೌಧದ ಎದುರು ಸಮಾರಂಭ ಆಯೋಜಿಸಿದವರು ಯಾರು. ಆರ್ ಸಿಬಿ ತಂಡವನ್ನು ಆಹ್ವಾನಿಸಿದವರು ಯಾರು. ರಾಜ್ಯಪಾಲರು ತಮ್ಮನ್ನು ಮುಖ್ಯಮಂತ್ರಿಗಳೇ ಕರೆದಿದ್ದರು ಎನ್ನುತ್ತಿದ್ದಾರೆ. ಆರ್ ಸಿಬಿ, ಚಿನ್ನಸ್ವಾಮಿ ಕ್ರೀಡಾಂಗಣದವರು ಹಾಗೂ ಸರ್ಕಾರ ಒಬ್ಬರ ಮೇಲೊಬ್ಬರು ದೂರುತ್ತಿದ್ದಾರೆ. ಇವರೆಲ್ಲರೂ ಸೇರಿ ಮೃತರಿಗೆ ತಲಾ 5 ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಸಿದ್ದರಾಮಯ್ಯರವರ ಸಚಿವ ಸಂಪುಟದಲ್ಲಿ ಅನೇಕ ಸಚಿವರು ಪಾಳೇಗಾರರಂತೆ ಇದ್ದಾರೆ. ಅವರ ಒತ್ತಡ ಮುಖ್ಯಮಂತ್ರಿಗಳ ಮೇಲೆ ಹೆಚ್ಚಾಗಿದೆ. ಕಾಲ್ತುಳಿತ ಪ್ರಕರಣವನ್ನು ಪ್ರಶ್ನಿಸಬೇಕಾದ ವಿ.ಪಕ್ಷ ಕೂಡ ಗಟ್ಟಿಯಾಗಿ ಧ್ವನಿ ಎತ್ತುತ್ತಿಲ್ಲ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

ಪ್ರತಿಭಟನೆಯಲ್ಲಿ ಕರುನಾಡು ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ , ಜಿಲ್ಲಾಧ್ಯಕ್ಷ ಸಿ.ಎಸ್. ಜಯಕುಮಾರ್ , ತಾಲೂಕು ಅಧ್ಯಕ್ಷ ಗಂಗಾಧರ್ , ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ದಲಿತ ಘಟಕ ಜಿಲ್ಲಾಧ್ಯಕ್ಷ ಕೆ.ಜಯರಾಂ, ಯುವ ಘಟಕ ಜಿಲ್ಲಾಧ್ಯಕ್ಷ ಆರ್ .ಜೆ.ಅರ್ಜುನ್ , ಬಿಡದಿ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ, ಹೇಮಾವತಿ, ಮಹೇಂದ್ರಮ್ಮ, ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣಸ್ವಾಮಿ, ಪಾರ್ಥಸಾರಥಿ, ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ