ಕಂಬಳಕ್ಕೆ 5 ಕೋಟಿ ರು. ಅನುದಾನ ಬೇಡಿಕೆ: ಡಾ.ದೇವಿಪ್ರಸಾದ್‌ ಶೆಟ್ಟಿ

KannadaprabhaNewsNetwork |  
Published : Nov 22, 2025, 03:00 AM IST
Kambala

ಸಾರಾಂಶ

ರಾಜ್ಯ ಸರ್ಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಕಂಬಳ ಕ್ರೀಡೆಗೆ ಸರ್ಕಾರ 5 ಕೋ. ರು. ಅನುದಾನ ಒದಗಿಸಿಕೊಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್‌ ಶೆಟ್ಟಿ ಮನವಿ ಮಾಡಿದ್ದಾರೆ.

 ಮಂಗಳೂರು :  ರಾಜ್ಯ ಸರ್ಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಕಂಬಳ ಕ್ರೀಡೆಗೆ ಸರ್ಕಾರ 5 ಕೋ. ರು. ಅನುದಾನ ಒದಗಿಸಿಕೊಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಐಕಳಬಾವ ಡಾ. ದೇವಿಪ್ರಸಾದ್‌ ಶೆಟ್ಟಿ ಮನವಿ ಮಾಡಿದ್ದಾರೆ.

5 ಕೋ. ರು. ಮೀಸಲಿಡಬೇಕು ಎಂದು ಆಗ್ರಹ

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ 25 ಜೋಡುಕರೆ ಕಂಬಳಗಳು ನಡೆಯಲಿದ್ದು ಇದಕ್ಕೆ ಮುಂದಿನ ಬಜೆಟ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ತಲಾ 2.5 ಕೋ.ರು.ಗಳಂತೆ ಒಟ್ಟು 5 ಕೋ. ರು. ಮೀಸಲಿಡಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ 10 ಕಂಬಳಗಳಿಗೆ ತಲಾ 5 ಲ.ರು.ನಂತೆ ಒಟ್ಟು 50 ಲ.ರು. ಬಿಡುಗಡೆ ಮಾಡಿತ್ತು. ಆಗ 20 ಕಂಬಳಗಳು ನಡೆದಿದ್ದು, ಆ ಮೊತ್ತ ಸಾಕಾಗಲಿಲ್ಲ. ಕ್ರೀಡಾ ಇಲಾಖೆ ಪ್ರತಿ ಕಂಬಳಕ್ಕೆ 2 ಲ.ರು. ಬಿಡುಗಡೆ ಮಾಡಿತ್ತು. ಒಂದು ಕಂಬಳ ಆಯೋಜನೆಗೆ 40 ರಿಂದ 50 ಲ.ರು. ವೆಚ್ಚವಾಗುತ್ತದೆ. ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಆದರೆ ಚಿನ್ನದ ದರ ವಿಪರೀತ ಹೆಚ್ಚಾಗಿರುವುದರಿಂದಲೂ ಹೊರೆಯಾಗಿದೆ. 

 ಕಂಬಳದಿಂದ ಕ್ರೀಡೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ಪ್ರಯೋಜನವಾಗುತ್ತಿದೆ. ಅನೇಕ ಕುಟುಂಬಗಳು ಕಂಬಳವನ್ನು ಅವಲಂಬಿಸಿಕೊಂಡಿವೆ ಎಂದು ಅವರು ಹೇಳಿದರು.ಕಂಬಳದ ತೀರ್ಪುಗಾರರು, ಕೋಣ ಓಡಿಸುವವರು, ಪರಿಚಾರಕ ವರ್ಗದವರು ಸೇರಿದಂತೆ ಕಂಬಳದಲ್ಲಿ ತೊಡಗಿಸಿಕೊಂಡವರ ಜೀವನ ಭದ್ರತೆಗಾಗಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಒದಗಿಸಬೇಕು. ಕಂಬಳ ಜಾನಪದ ಸಂಪ್ರದಾಯವಾಗಿರುವುದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕವೂ ಪ್ರೋತ್ಸಾಹ ನೀಡಬೇಕು. ಒಂಟಿ ಕರೆಯ ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ಒದಗಿಸಬೇಕಾಗಿದೆ ಎಂದು ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದರು. 

ನಿಯಮ ಕಟ್ಟುನಿಟ್ಟು ಪಾಲನೆಗೆ ಸೂಚನೆ: 

ಕಂಬಳಗಳನ್ನು ನಡೆಸಲು ಅಸೋಸಿಯೇಷನ್ ಬೈಲಾ ರಚಿಸಿದ್ದು ಕಂಬಳ ಇನ್ನಷ್ಟು ವ್ಯವಸ್ಥಿತವಾಗಿ ನಡೆಯಬೇಕು. ಕಂಬಳ ಆರಂಭವಾಗಿ 24 ಗಂಟೆ ಒಳಗೆ ಮುಕ್ತಾಯಗೊಳ್ಳಬೇಕು. ಸಮಯ ಪಾಲನೆ ಮಾಡಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಕೋಣಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಬಾರದು ಎಂದು ಕೂಡ ಸೂಚಿಸಲಾಗಿದೆ. 

ರಾತ್ರಿ 10 ಗಂಟೆಯ ಅನಂತರ ಧ್ವನಿವರ್ಧಕ ಬಳಕೆಯ ನಿಯಮಗಳನ್ನು ಸಂಘ ಕಟ್ಟುನಿಟ್ಟಾಗಿ ಪಾಲಿಸಲಿದೆ. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕದ ಶಬ್ದವನ್ನು ಕಂಬಳ ಕರೆ ಒಳಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಈ ವರ್ಷದಿಂದ ಸಬ್ ಜೂನಿಯರ್ ವಿಭಾಗಕ್ಕೆ ಅವಕಾಶವಿರುವುದಿಲ್ಲ. ಇದರಿಂದಾಗಿ ಸುಮಾರು ಮೂರು ಗಂಟೆಗಳ ಸಮಯ ಉಳಿಸಲು ಸಾಧ್ಯವಾಗಲಿದೆ. ಸಬ್ ಜೂನಿಯರ್ ಕೋಣಗಳಿಗೆ ತರಬೇತಿ ಸಿಗುವಂತಾಗಲು ಪ್ರತ್ಯೇಕ ಕೂಟಗಳನ್ನು ಆಯೋಜಿಸಲಾಗುವುದು. ಕಂಬಳ ಇದುವರೆಗೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಅದಕ್ಕೆ ಧಕ್ಕೆಯಾಗದಂತೆಯೇ ಮುಂದುವರಿಯಲು ನಿಗಾ ವಹಿಸಲಾಗುವುದು. ಜಿಲ್ಲಾಡಳಿತ ಸಹಕಾರದ ಭರವಸೆ ನೀಡಿದೆ ಎಂದು ಅವರು ಹೇಳಿದರು. 

ಕಂಬಳದಲ್ಲಿ ಭಾಗವಹಿಸುವ ಕೋಣಗಳ ಸಂಖ್ಯೆಯೂ ಹೆಚ್ವಾಗಿದೆ. ಈ ಹಿಂದೆ 150- 160 ಇದ್ದ ಕೋಣಗಳ ಸಂಖ್ಯೆ 280ಕ್ಕೆ ಏರಿಕೆಯಾಗಿದೆ. ಇದರಿಂದಾಗಿಯೂ ಸಮಯ ಪರಿಪಾಲನೆ ಕಷ್ಟಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು. 

3 ಕಡೆ ಹೊಸದಾಗಿ ಕಂಬಳ

: ಸಮಯವನ್ನು ಮೇಲ್ವಿಚಾರಣೆ ಮಾಡಲು ಟೈಮರ್‌ಗಳು, ಸಿಸಿಟಿವಿ ಕೆಮರಾಗಳು ಮತ್ತು ಹೆಚ್ಚುವರಿ ರೆಕಾರ್ಡಿಂಗ್ ಸಾಧನಗಳನ್ನು ಬಳಸಲಾಗುತ್ತದೆ. ವಿಳಂಬ ತಡೆಯುವುದು, ಆಧುನಿಕ ತಂತ್ರಜಾನ ಬಳಸಿ ಫಲಿತಾಂಶ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಈ ಬಾರಿ ಮೂರು ಕಡೆ ಹೊಸದಾಗಿ ಕಂಬಳ ನಡೆಯಲಿದೆ ಎಂದರು.ನ್ಯಾಯಾಲಯ ರಾಜ್ಯದ ಯಾವ ಮೂಲೆಯಲ್ಲಿಯೂ ಕಂಬಳ ನಡೆಸಲು ಯಾರೂ ಅಡ್ಡಿ ಮಾಡುವಂತಿಲ್ಲ ಎಂದು ಹೇಳಿದೆ. ಪಿಲಿಕುಳ ಕಂಬಳದ ಪ್ರಕರಣ ನಡೆಯುತ್ತಿದೆ. ಅದರ ತೀರ್ಪು ಹೊರಬೀಳಲಿದೆ. ಉಳಿದಂತೆ ಎಲ್ಲ ಕಡೆ ಹಸಿರುನಿಶಾನೆ ದೊರೆತಿದೆ ಎಂದು ಅವರು ಹೇಳಿದರು.

ಅಸೋಸಿಯೇಷನ್ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ.ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕಂಬಳ ಸಂಘಟಕ ಸಂದೀಪ್ ಶೆಟ್ಟಿ ಇದ್ದರು. 

ಮೈಸೂರು ಕಂಬಳಕ್ಕೆ ಆಸಕ್ತಿ 

ಮೈಸೂರಿನಲ್ಲಿ ಕಂಬಳ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಸಕ್ತಿ ತೋರಿಸಿದ್ದಾರೆ. ಅಲ್ಲಿ ಕಂಬಳಕ್ಕೆ ಪೂರಕವಾದ 20 ಎಕರೆ ಜಾಗವಿದೆ. ತಜ್ಞರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾಧ್ಯವಾದರೆ ಏಪ್ರಿಲ್ ನಂತರ ಅಲ್ಲಿ ಕಂಬಳ ನಡೆಸಲಾಗುವುದು. ಬೆಂಗಳೂರಿನಲ್ಲಿ ಕಂಬಳ ನಡೆಸಲು ಈ ಬಾರಿ ಬೇಡಿಕೆ ಬಂದಿಲ್ಲ ಎಂದು ಅವರು ತಿಳಿಸಿದರು.ರಾಷ್ಟ್ರೀಯ ಮಾನ್ಯತೆಗಾಗಿ ಪ್ರಧಾನಿಗೆ ಮನವಿ: ಕಂಬಳಕ್ಕೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ನ.28ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ