ಕನ್ನಡಪ್ರಭ ವಾರ್ತೆ ಸಿರಿಗೆರೆ
ಗ್ರಹಣಗಳು ಬಾಹ್ಯಕಾಶದಲ್ಲಿ ಸಾಮಾನ್ಯವಾಗಿ ನಡೆಯುವ ನೆರಳು ಬೆಳಕಿನ ಆಟದ ವಿದ್ಯಮಾನಗಳು. ಚಂದ್ರ ಗ್ರಹಣದ ಬಗ್ಗೆ ಇರುವ ಆತಂಕಗಳನ್ನು ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬೇಕು ಎಂದು ಡಾ.ಕೆ.ಎನ್.ಮಹೇಶ್ ತಿಳಿಸಿದರು.ಸಮೀಪದ ಕಡ್ಲೆಗುದ್ದು ಗ್ರಾಮದ ಆಂಜನೇಯ ಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಚಂದ್ರೋತ್ಸವ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸೂರ್ಯನ ಸುತ್ತ ಭೂಮಿ ಸುತ್ತುವಂತೆ, ಭೂಮಿಯ ಸುತ್ತ ಚಂದ್ರ ಸುತ್ತುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೆ ಸುತ್ತುವಾಗ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳ ರೇಖೆಯಲ್ಲಿ ಬಂದಾಗ ಗ್ರಹಣ ಉಂಟಾಗುತ್ತದೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣವಾಗುತ್ತದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಸಾಮಾನ್ಯವಾಗಿ ಹುಣ್ಣಿಮೆಯಲ್ಲಿ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣದಲ್ಲಿ ಮೂರು ವಿಧಗಳಿವೆ. ಸಂಪೂರ್ಣ ಚಂದ್ರ ಗ್ರಹಣ, ಪಾರ್ಶ್ವ್‌ಚಂದ್ರಗ್ರಹಣ ಮತ್ತು ಕಂಕಣ ಚಂದ್ರ ಗ್ರಹಣ.ಇಂದು ಸಂಭವಿಸುತ್ತಿರುವುದು ಸಂಪೂರ್ಣ ಚಂದ್ರ ಗ್ರಹಣ. ಭಾರತೀಯ ಕಾಲಮಾನ ಮಧ್ಯಾಹ್ನ 3.20 ಗಂಟೆಗೆ ಆರಂಭವಾಗಿ ಸಂಜೆ 6.48ಕ್ಕೆ ಕೊನೆಗೊಳ್ಳುತ್ತದೆ. ಸಂಜೆ 4.34 ಗಂಟೆಗೆ ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣ ಆವರಿಸಿಕೊಳ್ಳುತ್ತದೆ. ಸಂಜೆ 5.33ರ ನಂತರ ಬಿಡುಗಡೆಗೊಳ್ಳುತ್ತಾ ಸಾಗಿ 6.48ಕ್ಕೆ ಪೂರ್ಣಗೊಳ್ಳುತ್ತದೆ. ಸುದೀರ್ಘ ಅವಧಿಯ ಚಂದ್ರಗ್ರಹಣ ಪೂರ್ವ ಏಷ್ಯಾ, ಆಸ್ಪ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೋಚರವಾಗುತ್ತದೆ. ಭಾರತದಲ್ಲೂ ಗ್ರಹಣ ಸಂಭವಿಸುತ್ತದೆಯಾದರೂ ಕೇವಲ 10ರಿಂದ 20 ನಿಮಿಷ ಮಾತ್ರ ಇರುತ್ತದೆ ಎಂದರು.
ನಡೆಯಲಿರುವ ಚಂದ್ರಗ್ರಹಣ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಪೂರ್ಣ ಕಾಣಿಸಲಿದ್ದು, ಕರ್ನಾಟಕದಲ್ಲಿ ಸಂಜೆ ಭಾಗಶಃ ಗೋಚರವಾಗಲಿದೆ. ಇಂದು (ಮಾ.3) ಮಧ್ಯಾಹ್ನ 3.20ಕ್ಕೆ ಪ್ರಾರಂಭವಾಗಿ 6.47 ಕೊನೆಗೊಳ್ಳಲಿದೆ ಎಂದರು.
ಇದು 2026 ಏಕೈಕ ಚಂದ್ರಗಹಣ. ಹುಣ್ಣಿಮೆಯಂದು ನಡೆಯುವುದರಿಂದ ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು. ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗುವುದರಿಂದ ನಮಗೆ ಗ್ರಹಣದ ಚಂದ್ರ ಕಾಣುವುದೇ 9 ನಿಮಿಷ ಮಾತ್ರ. ಅದೂ ಪಾರ್ಶ್ವ ಚಂದ್ರಗ್ರಹಣ. ಬರೀ ಚಂದ್ರನ ಶೇ.8 ಭಾಗ ಮಾತ್ರ ಗ್ರಹಣ ಆವರಿಸಲಿದೆ. ಸಂಜೆ 6.47ಕ್ಕೆ ಗ್ರಹಣ ಮುಗಿಯುವುದರಿಂದ ಗ್ರಹಣದ ಚಂದ್ರ ಕಾಣ ಸಿಗುವುದು ಕಷ್ಟ. ಈ ಗ್ರಹಣದ ಕಡೆಯ ಶೇ.8 ಅಂಶ ಅಂದರೆ ಬರೇ 9 ನಿಮಿಷ ಗ್ರಹಣ ಗೋಚರಿಸುವುದು. ಚಂದ್ರಗ್ರಹಣದ ಕುರಿತು ಆತಂಕ ಭಯ ಬಿಟ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಗ್ರಹಣದ ನೈಸರ್ಗಿಕ ವಿದ್ಯಮಾನವನ್ನು ಸಂಭ್ರಮಿಸೋಣ ಎಂದರು. ಚಂದ್ರಗ್ರಹಣದ ಪ್ರಯುಕ್ತ ಶಾಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಪಾಯಸವನ್ನು ಸವಿದು ಚಂದ್ರೋತ್ಸವ ಜಾಗೃತಿ ಕಾರ್ಯಕ್ರಮ ಆಚರಿಸಿದರು. ಶಿಕ್ಷಕರಾದ ಮಂಜುನಾಥ್ ನಟರಾಜ್ ನಾಗರಾಜ್ ಮಂಜಪ್ಪ ಕರಿಬಸಪ್ಪ ಕಮಲಾಕ್ಷಿ ಹಾಜರಿದ್ದರು.