ರಾಯಚೂರು : ರಾಯಚೂರು, ಕಲಬುರಗಿ, ಬೀದರ್ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಿದ್ದು, ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ರಾಯಚೂರು ತಾಲೂಕಿನ ಯಾಪಲದಿನ್ನಿಯಲ್ಲಿ ‘ವಿಬಿ-ಜಿರಾಮ್‌ಜಿ’ (ಉದ್ಯೋಗ ಖಾತರಿ) ಕಾಮಗಾರಿಯಲ್ಲಿ ತೊಡಗಿದ್ದ ಕೃಷಿ ಕೂಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ.
ಹುಸೇನಪ್ಪ ಮಡಿವಾಳ (50) ಮೃತ ದುದೈವಿ
ಗ್ರಾಮದ ನಿವಾಸಿ ಹುಸೇನಪ್ಪ ಮಡಿವಾಳ (50) ಮೃತ ದುದೈವಿ. ‘ವಿಬಿ-ಜಿರಾಮ್‌ಜಿ’ ಯೋಜನೆಯಡಿ ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ರಾಳ್ಳಕುಂಟಾ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೆಲಸ ನಡೆದಿತ್ತು. ಸೋಮವಾರ ಮಧ್ಯಾಹ್ನದ ಎರಡನೇ ಹಾಜರಾತಿಯನ್ನು ದಾಖಲಿಸಲು ಫೋಟೋ ತೆಗೆಯುತ್ತಿದ್ದ ಸಮಯದಲ್ಲಿ ಬಿಸಿಲಿನ ತಾಪದ ಪರಿಣಾಮ ಲೋ ಬಿಪಿಯಾಗಿ ಅವರು ಕುಸಿದು ಬಿದ್ದ.
ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಾವು
ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಆತನ ಸಾವಿಗೆ ಬಿಸಿಲಿನ ತಾಪವೇ ಕಾರಣ ಎಂದು ಕುಟುಂಬಸ್ಥರು, ಗ್ರಾಮಸ್ಥರು ಶಂಕಿಸಿದ್ದಾರೆ, ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ನಿಜವಾದ ಕಾರಣ ಗೊತ್ತಾಗಲಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
