ಭೂ ರಹಿತ ಭೋವಿ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಗೆ ನೆರವು: ರಾಮಪ್ಪ

| Published : Nov 11 2025, 01:15 AM IST

ಭೂ ರಹಿತ ಭೋವಿ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಗೆ ನೆರವು: ರಾಮಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಭೂ ಒಡೆತನ ಯೋಜನೆಯಡಿ ಭೋವಿ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ನಿಗಮದಿಂದ 20 ಲಕ್ಷ ಧನಸಹಾಯ ನೀಡಲಾಗುವುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.

- ಜಮೀನು ಖರೀದಿಗೆ 20 ಲಕ್ಷ ರು. ಧನ ಸಹಾಯ, ಭೋವಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭೂ ಒಡೆತನ ಯೋಜನೆಯಡಿ ಭೋವಿ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ನಿಗಮದಿಂದ 20 ಲಕ್ಷ ಧನಸಹಾಯ ನೀಡಲಾಗುವುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಹೇಳಿದರು.ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಸೋಮವಾರ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫಲಾನುಭವಿ ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ.ಮೀ. ವ್ಯಾಪ್ತಿಯೊಳಗೆ ಜಮೀನು ಖರೀದಿಸಿ ಭೋವಿ ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಮಾಲೀಕರನ್ನಾಗಿ ಮಾಡುವುದು ಈ ಯೋಜನೆ ಉದ್ದೇಶವಾಗಿದೆ ಎಂದರು.ಜಿಲ್ಲೆಯಲ್ಲಿ ಭೋವಿ ಸಮುದಾಯ 5 ವಿಧಾನಸಭಾ ಕ್ಷೇತ್ರಗಳಿಂದ 33 ಸಾವಿರ ಜನಸಂಖ್ಯೆ ಇರುವುದಾಗಿ ಅಂಕಿ ಅಂಶದ ಮೂಲಕ ತಿಳಿದು ಬಂದಿದ್ದು, ಈ ಕಾರಣದಿಂದ ಅಧಿಕಾರಿಗಳು ಜೊತೆಗೂಡಿ ಸಂಪೂರ್ಣ ಎಲ್ಲ 8 ಯೋಜನೆಗಳ ಬಗ್ಗೆ ವಿವರಣೆ ಕೊಡುವ ಮೂಲಕ ಸರ್ಕಾರದ ಸೌಲಭ್ಯ ಸಮುದಾಯದ ಜನರಿಗೆ ತಲುಪಲು ಅಧಿಕಾರಿಗಳು ಹೆಚ್ಚು ಪ್ರಚಾರ ಕೈಗೊಂಡು ಯೋಜನೆ ಲಾಭ ದೊರೆಯುವಂತೆ ಮಾಡಬೇಕು ಎಂದರು.ಕುರಿ ಮೇಕೆ ಸಾಕಾಣಿಕೆ ಯೋಜನೆಯಡಿ 10 ಕುರಿ ಒಂದು ಟಗರು ಖರೀದಿಸಲು ಒಂದು ಲಕ್ಷ ಸಹಾಯಧನ ಪಡೆಯುವ ಅವಕಾಶವಿದ್ದು, ಸಮುದಾಯದ ಜನರು ಇದರ ಸದುಪಯೋಗ ಪಡೆಯಬೇಕು. ಹೈನುಗಾರಿಕೆ ಮಾಡುವವರಿಗೆ 2 ಹಸು ನೀಡಲಾಗುವುದು. ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಯಂ ಸ್ವಾವಲಂಬಿ ಎಂಬ ಸಾರಥಿ ಹಳದಿ ಬೋರ್ಡಿನ ಯೋಜನೆ ಯಡಿ 4 ಲಕ್ಷ ವಾಹನ ಖರೀದಿಗೆ ಧನಸಹಾಯ ನೀಡಲಾಗುತ್ತದೆ ಎಂದ ಅವರು, ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ಸೆಟ್ ಆಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲು ₹3.75 ಲಕ್ಷ ಧನಸಹಾಯ ನೀಡಲಾಗುವುದು ಎಂದು ತಿಳಿಸಿದರು.ಮೈಕ್ರೋಕ್ರೆಡಿಟ್ ಯೋಜನೆಯಡಿ 10 ಜನ ಮಹಿಳಾ ಸದಸ್ಯರು ಸಂಘ ನೋಂದಾಯಿಸಿಕೊಂಡಿದ್ದರೆ, ಅಂತಹ ಮಹಿಳಾ ಸಂಘದ ಮಹಿಳಾ ಸದಸ್ಯರಿಗೆ ₹5 ಲಕ್ಷ ಸಹಾಯಧನದೊಂದಿಗೆ ಸಾಲ ಸೌಲಭ್ಯ ನೀಡಲಾಗುವುದು. ಈ ಆರ್ಥಿಕ ನೆರವು ಬಳಸಿಕೊಂಡು ತಮ್ಮದೇ ಆದ ಸ್ವಂತ ಉದ್ಯೋಗದ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶ ನಮ್ಮ ನಿಗಮ ದ್ದಾಗಿದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯ ಮಾ. 31 ರೊಳಗೆ ನೇರವಾಗಿ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಸುದ್ಧಿಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ, ಕ್ಯಾಪ್ಟನ್ ರಾಜೇಶ್, ಜಯಸಿಂಹ, ನಿಗಮದ ಅಧಿಕಾರಿ ಮನೀಶ್ ನಾಯಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. 10 ಕೆಸಿಕೆಎಂ 2ಚಿಕ್ಕಮಗಳೂರು ಜಿಪಂ ಸಭಾಂಗಣದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ರಾಮಪ್ಪ ಅಧ್ಯಕ್ಷತೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆ ಸೋಮವಾರ ನಡೆಯಿತು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ಮಾಲತಿ, ಕ್ಯಾಪ್ಟನ್ ರಾಜೇಶ್ ಇದ್ದರು.