ಕನ್ನಡಪ್ರಭ ವಾರ್ತೆ ನಿಡಗುಂದಿ

ಎಲ್ಲಿ ನೋಡಿದರಲ್ಲಿ ಕೇಸರಿಮಯ ವಾತಾವರಣ. ಒಗ್ಗಟ್ಟಿನ ಸಂದೇಶ. ಶಿಸ್ತಿನ ಶೋಭಾಯಾತ್ರೆ. ಇದು ಕಂಡುಬಂದಿದ್ದು ಪಟ್ಟಣದಲ್ಲಿ ಭಾನುವಾರ ಜರುಗಿದ ಹಿಂದೂ ಸಮ್ಮೇಳನ ಹಾಗೂ ಬೃಹತ್ ಶೋಭಾಯಾತ್ರೆಯಲ್ಲಿ.ನಿಡಗುಂದಿಯಲ್ಲಿ ಸಾವಿರಾರು ಜನರು ಭಕ್ತಿ, ಸಂಸ್ಕೃತಿ ಮತ್ತು ಸಾಮಾಜಿಕ ಒಗ್ಗಟ್ಟಿನ ಸಂದೇಶ ಸಾರಿದದರು. ಈ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಎಲ್ಲರ ಗಮನ ಕೂಡ ಸೆಳೆಯಿತು. ಭಕ್ತಿಭಾವ ಮತ್ತು ದೇಶಭಕ್ತಿ ಭಾರತ ಮಾತಾ ಕೀ ಜೈ, ಜೈ ಶ್ರೀರಾಮ್ ಘೋಷಣೆಗಳೊಂದಿಗೆ ಶಿಸ್ತಿನಿಂದ ಸಾವಿರಾರು ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಅಲಂಕೃತ ರಥದಲ್ಲಿ ನಾಡದೇವಿ ಭಾವಚಿತ್ರ ಹಾಗೂ ವಿವಿಧ ಶರಣರ, ಸಂತರ, ಮಹಾನ್ ನಾಯಕರ ಭಾವಚಿತ್ರಗಳು, ಕೇಸರಿ ಧ್ವಜಗಳನ್ನು ಹಿಡಿದು ಭಕ್ತರು ಜೈಕಾರಗಳನ್ನು ಕೂಗಿದರು. ಜತೆಗೆ ಘೋಷಣೆಗಳೊಂದಿಗೆ ಮೆರವಣಿಗೆಯನ್ನು ನಡೆಸಿದರು. ಮಕ್ಕಳು ಸಾಂಪ್ರದಾಯಿಕ ವೇಷಭೂಷಣದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಡೊಳ್ಳು, ತಾಳಗಳ ನಾದ ಮತ್ತು ಲೆಜಿಮ್ ತಂಡಗಳ ಪ್ರದರ್ಶನ ಮೆರವಣಿಗೆಗೆ ಮತ್ತಷ್ಟು ಉತ್ಸಾಹವನ್ನು ತುಂಬಿತು. ಇದರ ನಡುವೆ ದಾರಿ ಮಧ್ಯೆ ಅಲ್ಲಲ್ಲಿ ನಿವಾಸಿಗಳು ಹೂಮಾಲೆಗಳಿಂದ ಸ್ವಾಗತಿಸಿ ಮೆರವಣಿಗೆಯು ಮತ್ತಷ್ಟು ಉತ್ಸಾಹಭರಿತವಾಗಿ ಸಾಗಲು ನೆರವಾಯಿತು.

ಗ್ರಾಮದೇವತೆ ದೇವಸ್ಥಾನದಿಂದ ಆರಂಭವಾದ ಈ ಮೆರವಣಿಗೆ ಬಜಾರ ರಸ್ತೆ, ಕಾಲೇಜು ರಸ್ತೆ, ಹೊಸ ಬಸ್ ನಿಲ್ದಾಣದಿಂದ ಸಾಗಿ ವಿನಾಯಕ ದೇವಸ್ಥಾನ ಹತ್ತಿರದಲ್ಲಿ ಹಮ್ಮಿಕೊಂಡ ಅದ್ಧೂರಿ ವೇದಿಕೆ ಕಾರ್ಯಕ್ರಮದವರೆಗೆ ನಡೆಯಿತು.ಶೋಭಾಯಾತ್ರೆ ಸಾಗಿದ ಎಲ್ಲೆಡೆ ಹಬ್ಬದ ವಾತಾವರಣದ ಪರಿಸ್ಥಿತಿ ಕಂಡುಬಂತು. ಸಮಾಜದ ವಿವಿಧ ವರ್ಗಗಳ ಜನರು ಭಾಗವಹಿಸಿದ್ದು, ಕಾರ್ಯಕ್ರಮವು ಒಗ್ಗಟ್ಟಿನ ಸಂದೇಶವನ್ನು ಸಾರಿತು. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಬಂದೋಬಸ್ತ್ ಕೈಗೊಂಡಿದ್ದರು. ಶಾಂತಿ ಮತ್ತು ಸೌಹಾರ್ದತೆಯ ನಡುವೆ ಮೆರವಣಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.ಶೋಭಾಯಾತ್ರೆಗೆ ಗಣ್ಯರು ಚಾಲನೆ ನೀಡಿ ಮಾತನಾಡಿ, ಧಾರ್ಮಿಕ ಆಚರಣೆಗಳ ಮೂಲಕ ಸಮಾಜದಲ್ಲಿ ಏಕತೆ ಮತ್ತು ಸಂಸ್ಕೃತಿ ಉಳಿಯಬೇಕು. ಯುವಪೀಳಿಗೆಗೆ ಸಂಸ್ಕಾರ ಮತ್ತು ದೇಶಭಕ್ತಿ ಅರಿವು ಮೂಡಿಸುವುದೇ ಶೋಭಾಯಾತ್ರೆ ಉದ್ದೇಶವಾಗಿದೆ ಎಂದರು. ನಿಡಗುಂದಿಯಲ್ಲಿ ನಡೆದ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾಯಾತ್ರೆ ಭಕ್ತಿ ಮತ್ತು ಸಂಘಟಿತ ಶಕ್ತಿಯ ಪ್ರದರ್ಶನವಾಗಿತ್ತು.