ಕನ್ನಡಪ್ರಭ ವಾರ್ತೆ ಬಾದಾಮಿ
ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲ, ನೆಲದ ಬಗ್ಗೆ ಚಿಂತನೆ ಮಾಡುವ ವೇದಿಕೆಯಾಗಿದೆ. ನೆಲಕ್ಕೆ ಬೇಕಾಗುವ ಚಿಂತನೆ ಮಾಡುವುದು ಸಾಹಿತ್ಯದ ಕೆಲಸವಾಗಿದೆ ಎಂದು ಹಿರಿಯ ಸಾಹಿತಿ ವೈ.ಎಂ. ಯಾಕೊಳ್ಳಿ ಹೇಳಿದರು.ಪಟ್ಟಣದ ಎಸ್.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಾಗಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಾಹಿತಿಗಳು ನೆಲ ಜಲ ಅವಲೋಕಿಸಿ ಸಾಹಿತ್ಯ ಬರೆಯಬೇಕು. ರವಿ ಕಾಣದ್ದನ್ನು ರವಿ ಕಾಣುತ್ತಾನೆ ಎಂಬಂತೆ ಸಾಹಿತಿಗಳು ಅನುಭವಿಕವಾಗಿ ಪುಸ್ತಕ ಬರೆಯಬೇಕು. ಸಾಹಿತಿ ಪುಸ್ತಕಕ್ಕೆ ಸೀಮಿತವಾಗಬಾರದು. ವ್ಯಾಸ, ವಾಲ್ಮೀಕಿಯವರಿಂದ ಇಲ್ಲಿಯವರೆಗಿನ ಸಾಹಿತಿಗಳ ಸಾಹಿತ್ಯವನ್ನು ಅವರ ಚಿಂತನೆ ಮತ್ತು ಅವಲೋಕನ ಕುರಿತಾಗಿ ಅನುಕರಣೆ ಮಾಡಿ ಯುವ ಸಾಹಿತಿಗಳು ಬರವಣಿಗೆ ಮೂಲಕ ಹೊರ ಹೊಮ್ಮಬೇಕು ಎಂದು ಸಲಹೆ ನೀಡಿದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡಿ, ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿಗೆ ಮಹತ್ವದ ಯೋಜನೆಯಾದ ₹3.75 ಕೋಟಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿ ಪ್ರತಿಯೊಬ್ಬರಿಗೆ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಬೃಹತ್ ಗ್ರಂಥಾಲಯ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಪ್ರೊ.ಜಿ.ಬಿ.ಶೀಲವಂತರ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಜೆ.ದಾಜೀಬಾ ಜಗದಾಳೆ ಅವರು 10ನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ.ಜಿ.ಬಿ. ಶೀಲವಂತರ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜ ಹಸ್ತಾಂತರಿಸಿದರು. ನಂತರ ಜೆ. ದಾಜೀಬಾ ಜಗದಾಳೆ, ನಿಂಗಪ್ಪ ಬನ್ನೂರ ಮಾತನಾಡಿದರು. ವೇದಿಕೆ ಮೇಲೆ ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ಹೊನ್ನಯ್ಯ ಹಿರೇಮಠ, ಶಿವುಕುಮಾರ ಹಿರೇಮಠ, ಮಹಾಂತೇಶ ಹಟ್ಟಿ, ಡಾ.ಕೆ.ವಿ. ಕ್ಯಾಲಕೊಂಡ, ಮಹಾಂತೇಶ ಈಳಗೇರ, ಆರ್.ಎಂ. ಸಾರವಾಡ, ಆರ್.ಎಂ. ದಾದಿ, ಎಫ್.ಆರ್. ಪಾಟೀಲ(ಮಣ್ಣೇರಿ), ಸಿ.ಎಸ್. ನಾಗನೂರ ಇದ್ದರು.
ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಸತಾವಿಕವಾಗಿ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ ಸ್ವಾಗತಿಸಿದರು. ಬಸಮ್ಮಾ ನರಸಾಪೂರ, ಡಿ.ಬಿ. ಹಡಗಲಿ ನಿರೂಪಿಸಿದರು.
ಪುಸ್ತಕ ಬಿಡುಗಡೆ: ಶಾಸಕ ಭಿಮಸೇನ ಚಿಮ್ಮನಕಟ್ಟಿ, ನಿಂಗಪ್ಪ ಬನ್ನೂರ, ಈರಣ್ಣ ಕರಿಗೌಡರ ಇವರು ಶಾರದಾ ಮೇಟಿ ಅವರ ಮುಸ್ಸಂಜೆಯ ಹೊತ್ತಿನಲ್ಲಿ ಮತ್ತು ಇತರೆ ಲೇಖನಗಳು ಮತ್ತು ಅನಸೂಯಾ ಯಲಿಗಾರ ಅವರ ನನ್ನ ಕೂಸು ನನ್ನ ನನಸು ಮತ್ತು ಸುಭಾಸಚಂದ್ರ ಭಜಂತ್ರಿ ಇವರ ಕಪ್ಪೆ ಅರಭಟ್ಟ ಯಾರು? ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿದರು.
ಭುವನೇಶ್ವರಿ ದೇವಿ ಮೆರವಣಿಗೆ:ಬೆಳಗ್ಗೆ ಸಮ್ಮೇಳನಾಧ್ಯಕ್ಷರ ನೇತೃತ್ವದಲ್ಲಿ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ಕರಡಿ ಮಜಲು, ಡೊಳ್ಳು ಸಂಗೀತ ವಾದ್ಯಗಳ ಮೂಲಕ ಪಿಕಾರ್ಡ್ ಬ್ಯಾಂಕ್ ಆವರಣದಿಂದ ಆರಂಭವಾಗಿ ಶಿವಾಜಿ ಸರ್ಕಲ್, ಪುಲಿಕೇಶಿ ಸರ್ಕಲ್ ಮುಖ್ಯ ರಸ್ತೆಯ ಮೂಲಕ ಬಸವಮಂಟಪದ ವೇದಿಕೆಯವರೆಗೆ ನಡೆಯಿತು. ಮೆರವಣಿಗೆಯಲ್ಲಿ ಕನ್ನಡ ಅಭಿಮಾನಿಗಳು, ಸಾಹಿತ್ಯಾಸಕ್ತರು, ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಗುಂಡಪ್ಪ ತೀರ್ಥಪ್ಪನ್ನವರ, ಅಶೋಕ ಕೋಟನಕರ ಮೆರವಣಿಗೆಗೆ ಚಾಲನೆ ನೀಡಿದರು. ಶೇಖರಗೌಡ ಪಾಟೀಲ, ಹೊನ್ನಯ್ಯ ಹಿರೇಮಠ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುಸ್ತಕ ಮಳಿಗೆ; ಪುಸ್ತಕ ಮಳಿಗೆಗಳನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟನೆ ಮಾಡಿದರು. ಈಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸೇರಿದಂತೆ ಇತರರು ಇದ್ದರು.