ಬುಡ್ಗ ಜಂಗಮ್ ಸಮಾಜದ ಚಿಂತನ-ಮಂಥನ ಸಭೆ
ಕನ್ನಡಪ್ರಭ ವಾರ್ತೆ ಹೊಸಪೇಟೆರಾಜ್ಯದ 49 ಅಲೆಮಾರಿ ಸಮುದಾಯಗಳಿಗೆ ಒಳಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ, ಶೇ.1ರಷ್ಟು ಪಾಲು ನೀಡಬೇಕು ಎಂದು ಕರ್ನಾಟಕ ರಾಜ್ಯ ಬುಡ್ಗ ಜಂಗಮ (ಪ.ಜಾ.) ಕ್ಷೇಮಾಭಿವೃದ್ಧಿ ಸಂಘ ಒಕ್ಕೊರಲಿನಿಂದ ಒತ್ತಾಯಿಸಿದೆ.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಗೌತಮ್ ಬುದ್ಧ ಫಂಕ್ಷನ್ ಹಾಲ್‌ನಲ್ಲಿ ನಡೆದ ಬುಡ್ಗ ಜಂಗಮ್ ಸಮಾಜದ ಚಿಂತನ-ಮಂಥನ ಸಭೆಯಲ್ಲಿ ಒಳಮೀಸಲಾತಿಯಲ್ಲಿ ಅಲೆಮಾರಿಗಳಿಗೆ ಆದ ಅನ್ಯಾಯದ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು.ಒಳ ಮೀಸಲಾತಿಯಲ್ಲಿ ಅಲೆಮಾರಿಗಳಿಗೆ ನ್ಯಾಯ ಒದಗಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ರವಾನಿಸಲಾಯಿತು.ಬುಡ್ಗ ಜಂಗಮ ಸಮಾಜದ ರಾಜ್ಯಾಧ್ಯಕ್ಷ ಸಣ್ಣಮಾರೆಪ್ಪ ಮಾತನಾಡಿ, ರಾಜ್ಯದ 49 ಅಲೆಮಾರಿ ಸಮುದಾಯಗಳಿಗೆ ಒಳ ಮೀಸಲಾತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ, ಶೇ.1ರಷ್ಟು ಪಾಲು ನೀಡಬೇಕು. ಕರ್ನಾಟಕ ಸರ್ಕಾರ ಈಗಾಗಲೇ ಮೀಸಲಾತಿಯ ಒಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಸರ್ವೋಚ್ಚ ನ್ಯಾಯಾಲಯ 2024ರ ಆಗಸ್ಟ್ 1ರಂದು ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿದೆ. ಕಳೆದ 78 ವರ್ಷಗಳಲ್ಲಿ ಮೀಸಲಾತಿಯ ಮೂಲಕ ಸೂಕ್ತ ಪ್ರಾತಿನಿಧ್ಯ ಪಡೆಯದ ಅಲೆಮಾರಿ ಸಮುದಾಯಗಳಲ್ಲಿ ಈ ತೀರ್ಪು ಹೊಸ ಭರವಸೆಯನ್ನು ಮೂಡಿಸಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕವ್ಯಕ್ತಿ ಆಯೋಗ 49 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಇವುಗಳ ಜೊತೆಗೆ ಇನ್ನೂ ಹತ್ತು ಸಮುದಾಯಗಳನ್ನು ಸೇರ್ಪಡೆ ಮಾಡಿ ಶೇ.1ರಷ್ಟು ಪ್ರಮಾಣದ ಮೀಸಲಾತಿ ನಿಗದಿ ಮಾಡಿತ್ತು. ಆದರೆ, ಆಗಸ್ಟ್ 19ರಂದು ನಡೆದ ಕ್ಯಾಬಿನೆಟ್ ನಿರ್ಣಯವು ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಜಾತಿ ಸಮುದಾಯಗಳ ಗುಂಪಿಗೆ ಸೇರಿಸಿದೆ. ಇದರಿಂದ ಅಲೆಮಾರಿಗಳಿಗೆ ಭಾರೀ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಪೃಶ್ಯ ಸಮುದಾಯಗಳ ಗುಂಪಿಗೆ ಅಲೆಮಾರಿಗಳನ್ನು ಸೇರ್ಪಡೆ ಮಾಡಿದ್ದಲ್ಲದೆ, ಈ ಗುಂಪಿಗೆ ಶೇ.5ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಸಾಮಾಜಿಕ ನ್ಯಾಯ ಮತ್ತು ಸಮಾಜವಾದಿ ಆಶಯಗಳನ್ನು ಸದಾ ಪ್ರತಿಪಾದಿಸುತ್ತಾ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿಗಳಂತಹ ತಬ್ಬಲಿ ಸಮುದಾಯವನ್ನು ನಡು ನೀರಿನಲ್ಲಿ ಕೈಬಿಟ್ಟಿದ್ದಾರೆ. ಅಲೆಮಾರಿಗಳ ಬದುಕು ಹಸನುಗೊಳಿಸಲು ಪ್ರತ್ಯೇಕ ಗುಂಪು ರಚಿಸಿ ಶೇ.1ರಷ್ಟು ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದರು.ಚಿಂತಕ ಡಾ. ಅಶ್ವರಾಮ ಮಾತನಾಡಿ, ಒಳಮೀಸಲಾತಿಯನ್ನು ಜಾರಿ ಮಾಡುವ ಒತ್ತಡದಲ್ಲಿರುವ ಸರ್ಕಾರ 101 ಪರಿಶಿಷ್ಟ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ನಿಟ್ಟಿನಲ್ಲಿ ಮೀಸಲು ಪ್ರಮಾಣವನ್ನು ಎಚ್ಚರಿಕೆಯಿಂದ ನಿಗದಿಪಡಿಸಬೇಕಿತ್ತು. ಅದರಲ್ಲೂ ಅಲೆಮಾರಿಗಳನ್ನು ಉದ್ಧಾರ ಮಾಡುವ ಕೆಲಸ ಮಾಡಬೇಕಿತ್ತು ಎಂದು ಆಗ್ರಹಿಸಿದರು.
ಮುಖಂಡರಾದ ಶಿವರಾಜ್ ರುದ್ರಾಕ್ಷಿ, ಚಿನ್ನಪ್ಪ, ರಾಮಣ್ಣ, ಮಲ್ಲೇಶಪ್ಪ, ಶರಣಪ್ಪ, ಶಿವಕುಮಾರ, ವೆಂಕಟೇಶಪ್ಪ, ಸಣ್ಣಜ್ಜಯ್ಯ, ಕಿನ್ನೂರಿ ಶೇಖಪ್ಪ, ಗಂಗಾಧರ, ವೀರೇಶ, ಸಂಪತ್ ಕುಮಾರ್, ಖಾಸಿಂ ಮತ್ತಿತರರಿದ್ದರು.