ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಅನುದಾನಿತ ಶಾಲೆಗಳಲ್ಲಿ ನರೇಗಾ ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಅವಕಾಶವಿಲ್ಲ, ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರತ್ಯೇಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಮಕ್ಕಳಿಂದ ಬೇಡಿಕೆ, ಕೊಡಗರಹಳ್ಳಿ ಜಂಕ್ಷನ್‌ನಲ್ಲಿ ಅಡ್ಡಾದಿಡ್ಡಿ ವಾಹಗಳ ನಿಲುಗಡೆ ತಪ್ಪಿಸಲು ಬೇಡಿಕೆ ಮೊದಲಾದವು ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ಕೇಳಿ ಬಂದ ಪ್ರಮುಖ ಅಂಶಗಳು.
ಗ್ರಾ.ಪಂ. ಅಧ್ಯಕ್ಷೆ ನಿರತ ಬೆಳ್ಳಿಯಪ್ಪ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಸುಂಟಿಕೊಪ್ಪ ನಾಡು ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿ ಮಾತನಾಡಿ, ತಮ್ಮ ಶಾಲೆಗೆ ಶೌಚಾಲಯದ ಅಗತ್ಯತೆ ಇದ್ದು, ತುರ್ತಾಗಿ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಕೇಳಿದರು.
ಗ್ರಾ.ಪಂ. ಪಿಡಿಒ ರವೀಶ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಅವಕಾಶವಿದೆ. ಆದರೆ ಅನುದಾನಿತ ಶಾಲೆಗಳಲ್ಲಿ ನಿರ್ಮಾಣಕ್ಕೆ ಅವಕಾಶವಿಲ್ಲ. ಈ ಬಗ್ಗೆ ತುರ್ತಾಗಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಕೊಡಗರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಮಾತನಾಡಿ, ನಮ್ಮ ಶಾಲೆಯಲ್ಲಿ ಸೂಕ್ತ ನೀರಿನ ಟ್ಯಾಂಕ್ ವ್ಯವಸ್ಥೆ ಇರುವುದಿಲ್ಲ. ಈ ಬಗ್ಗೆ ಗ್ರಾ.ಪಂ. ವತಿಯಿಂದ ಕ್ರಮವಹಿಸುವಂತೆ ತಿಳಿಸಿದರು.
ಗ್ರಾ.ಪಂ. ಅಧ್ಯಕ್ಷೆ ನಿರತ ಬೆಳ್ಳಿಯಪ್ಪ ಮಾತನಾಡಿ, ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಶಾಂತಿ ನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ ಮಾತನಾಡಿ, ಕೊಡಗರಹಳ್ಳಿ ಜಂಕ್ಷನ್‌ನಲ್ಲಿ ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಾರೆ. ಇದರಿಂದ ಸಂಚಾರಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
ಇದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದರು. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಹಲವು ದೂರುಗಳು ಬಂದಿದ್ದು, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನವೀನ್ ಮಾತನಾಡಿ, ಮಕ್ಕಳ ಹಕ್ಕುಗಳು ಮತ್ತು ಗ್ರಾಮಸಭೆಯ ಮಹತ್ವದ ಬಗ್ಗೆ ತಿಳಿಸಿದರು. ಸುಂಟಿಕೊಪ್ಪ ಠಾಣೆಯ ಎ.ಎಸ್.ಐ ಸೈಮನ್ ಡಿ.ಕುನ್ಹ, ಸಂಚಾರಿ ನಿಯಮಗಳು, ಮಕ್ಕಳ ರಕ್ಷಣಾ ವಿಷಯಗಳ ಬಗ್ಗೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜ್ಯೋತಿ, ಆರೋಗ್ಯ ನಿರ್ವಹಣೆ, ವೈಯಕ್ತಿಕ ಶುಚಿತ್ವ ವಿಷಯಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಜಿಲ್ಲಾ ಐಇಸಿ ಸಂಯೋಜಕ ಪವನ್ ಕುಮಾರ್, ಮಕ್ಕಳ ಜ್ಞಾನ ವೃದ್ಧಿಯಲ್ಲಿ ಮಾಧ್ಯಮದ ಪಾತ್ರ ವಿಷಯದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಬಾಲ ವಿಜ್ಞಾನಿಗೆ ಸನ್ಮಾನ: ಸುಂಟಿಕೊಪ್ಪನಾಡು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀಷಾ, ರಾಜ್ಯಮಟ್ಟದ 31ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಕಲುಷಿತಗೊಳಿಸುತ್ತಿರುವ ಕಾವೇರಿ ನದಿ ಈ ವಿಷಯದ ಬಗ್ಗೆ ಪ್ರಬಂಧ ಮಂಡನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿನಿಯನ್ನು ಗ್ರಾ.ಪಂ. ವತಿಯಿಂದ ಗೌರವಿಸಲಾಯಿತು.
ಗ್ರಾ.ಪಂ. ಸದಸ್ಯರಾದ ನೀತ, ಕವಿತಾ, ಕಲಾಮಣಿ, ಚೆನ್ನಬಸವಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದಮಯಂತಿ, ಶಾಂತಿನಿಕೇತನ ಶಾಲೆಯ ಮುಖ್ಯೋಪಾಧ್ಯಾಯ ಮೇರಿ ಫಾಟಿಮಾ, ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.