ಮುಂಡರಗಿ: ತಾಲೂಕಿನ ಚಿಕ್ಕವಡ್ಡಟ್ಟಿ ಗ್ರಾಮದ ದಲಿತ(ಮಾದಿಗ) ಕುಟುಂಬಗಳಿಗೆ ಗ್ರಾಮದಲ್ಲಿ ಪ್ರತ್ಯೇಕ ನ್ಯಾಯಬೆಲೆ ಅಂಗಡಿ, ಸಾಮೂಹಿಕ ಮಹಿಳಾ ಶೌಚಾಲಯ ಮತ್ತು ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದುರಗಪ್ಪ ಹರಿಜನ ನೇತೃತ್ವದಲ್ಲಿ ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಸೋಮಣ್ಣ ಹೈತಾಪುರ. ಡಿಎಸ್ಎಸ್ ಮುಖಂಡರಾದ ಶಿವಾನಂದ ದೊಡ್ಡಮನಿ, ಕಟ್ಟೆಪ್ಪ ಚಿಗರಮ್ಮನವರ, ಶಿಪುತ್ರಪ್ಪ ಗುಂಡಪ್ಪನವರು, ಫಕ್ಕೀರಪ್ಪ ಸೊಮ್ಮನ್ನವರ, ರಣದಪ್ಪ ಮೈಲ್ಲಮ್ಮನವರು, ಬಸವರಾಜ್ ತಿಮ್ಮನ್ನವರ, ಮಜುರಪ್ಪ ಉಡಚಮ್ಮನವರ್, ಹನುಮಂತ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.28ರಂದು ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ
ನರಗುಂದ: ಪಟ್ಟಣದ ರಾಣಿ ಚೆನ್ನಮ್ಮ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನೆ, ಕಳಸಾರೋಹಣ ಮತ್ತು ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಏ. 28ರಂದು ನೆರವೇರಲಿದೆ.ಏ. 24ರಿಂದ 28ರ ವರೆಗೆ ಸಂಜೆ 6 ಗಂಟೆಗೆ ಪ್ರತಿನಿತ್ಯ ಪಂಚಗೃಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳಿಂದ ಆಧ್ಯಾತ್ಮಿಕ ಪುರಾಣ ಪ್ರವಚನ ಕಾರ್ಯಕ್ರಮ ಜರುಗಲಿದೆ.ಏ. 28ರಂದು ಬ್ರಾಹ್ಮಿ ಮುಹೂರ್ತದಲ್ಲಿ ಆಂಜನೇಯ ಸ್ವಾಮಿಗೆ ಮಹಾರುದ್ರಾಭಿಷೇಕ, ಅಘೋರ ಹೋಮ- ಹವನಾದಿಗಳೊಂದಿಗೆ ಶ್ರೀಗಳ ಅಮೃತ ಹಸ್ತದಿಂದ ಜೀವಕಳೆ ತುಂಬಿ ನಂತರ ಪೂರ್ಣಾಹುತಿ, ಮಹಾಮಂಗಳಾರತಿಯೊಂದಿಗೆ ಸಕಲ ಕಾರ್ಯಕ್ರಮಗಳು ಸಂಪನ್ನಗೊಳ್ಳುವುವು.ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಡಾ. ಗುರುಸಿದ್ಧವೀರ ಶಿವಾಚಾರ್ಯ ಶ್ರೀಗಳು, ಶಿವಕುಮಾರ ಶ್ರೀಗಳು, ಶಾಂತಲಿಂಗ ಶ್ರೀಗಳು, ಸಿದ್ದಪ್ಪ ಕಲ್ಲಪ್ಪ ಕೋಟಿ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಸಿ. ಪಾಟೀಲ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಅಭಿಯಂತರ ಎಸ್.ಎ. ಕಾಳಗಿ ಇತರರು ಭಾಗವಹಿಸುವರು ಎಂದು ದೇವಸ್ಥಾನದ ಸದ್ಭಕ್ತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.