ಬ್ಯಾಡಗಿ: ಮಿನಿ ತಿರುಪತಿ ಎಂದೇ ಖ್ಯಾತಿ ಪಡೆದ ಕಾಂತೇಶನ (ಆಂಜನೇಯ) ಸನ್ನಿಧಿ ತಾಲೂಕಿನ ಕದರಮಂಡಲಗಿ ಗ್ರಾಮದ ಸ್ಪಂದನ ಪ್ರೌಢಶಾಲೆಯ ವಿದ್ಯಾರ್ಥಿನಿ ನಿವೇದಿತಾ ಪರಶುರಾಮ ಅಜ್ಜಮ್ಮನವರ 623 (625ಕ್ಕೆ) ಅಂಕಗಳಿಸುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಗಳಿಸಿದ್ದಾಳೆ.
ಯಾವುದೇ ವಿಶೇಷ ತರಬೇತಿ ಪಡೆಯದೇ ಶಿಕ್ಷಕರ ಹೇಳಿದ ಪಾಠವನ್ನಷ್ಟೇ ಕೇಳಿ ಮನೆಯ ಕೆಲಸದ ನಡುವೆಯೂ ನಿರಂತರ ಸುಮಾರು 8 ತಾಸುಗಳ ಅಧ್ಯಯನ ನನ್ನ ಸಾಧನೆಗೆ ಕಾರಣವೆನ್ನುತ್ತಾಳೆ ನಿವೇದಿತಾ. ಸ್ಪಂದನ ಎಂಬ ಖಾಸಗಿ ಶಾಲೆಯಲ್ಲಿ ಇರುವ ಶಿಕ್ಷಕರ ಪಾಠಗಳೇ ಶ್ರೀರಕ್ಷೆಯಾಗಿದ್ದು, ಅವರು ಹೇಳಿದ್ದನ್ನು ಪಾಲಿಸಿಕೊಂಡು ಬಂದಿದ್ದೇನೆ ಎನ್ನುತ್ತಾಳೆ. ಕನ್ನಡ 125, ಇಂಗ್ಲಿಷ್ 100, ಹಿಂದಿ 100 ಸಮಾಜ ವಿಜ್ಞಾನ 100, ಗಣಿತ 100, ವಿಜ್ಞಾನಕ್ಕೆ ಮಾತ್ರ 98 ಅಂಕಗಳನ್ನು ಪಡೆದುಕೊಂಡಿದ್ದಾಳೆ.ಗ್ರಾಮೀಣ ಪ್ರದೇಶ ಕೃಷಿಕ ಕುಟುಂಬದಲ್ಲಿ ಜನಿಸಿದ ಮಗಳು ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದಿದ್ದು ನಮ್ಮ ತಾಲೂಕಿಗೆ ಜಿಲ್ಲೆಗೆ ಹೆಮ್ಮೆಯ ವಿಷಯ. ಅಂಕಗಳನ್ನು ಮೊದಲು ಕೇಳಿದಾಗ ನನಗೂ ಆಶ್ಚರ್ಯವಾಯಿತು. ಆದರೆ ನಿಜ ಸಂಗತಿ ತಿಳಿದು ಖುಷಿಯಾಯಿತು, ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಆಕೆಗೆ ನೆರವಾಗುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಫಲಿತಾಂಶ ಬಗ್ಗೆ ನನಗೆ ಮೊದಲೇ ಗೊತ್ತಿತ್ತು, ಪ್ರತಿ ಪೇಪರ್ ಬರೆದಾಗಲೂ ಗುರುಗಳಿಗೆ ಯಾವುದೇ ತಪ್ಪು ಬರೆದಿಲ್ಲ ಎಂದು ಹೇಳುತ್ತಿದ್ದೆ, ವಿಜ್ಞಾನ ವಿಷಯದಲ್ಲಿ ತಪ್ಪಿದ್ದನ್ನು ಅವರ ಗಮನಕ್ಕೆ ತಂದಿದ್ದೇನೆ. ಶಿಕ್ಷಕರ ಮತ್ತು ಪಾಲಕರ ಆಶೀರ್ವಾದಿಂದ ಸಾಧನೆ ಮಾಡಿದ್ದೇನೆ. ಖುಷಿ ತಂದಿದೆ ಎಂದು ನಿವೇದಿತಾ ಅಜ್ಜಮ್ಮನವರ ಹೇಳಿದರು.ಎರಡು ದಶಕಗಳಿಂದ ಹಿಂದೆ ಕಟ್ಟಿದ್ದ ಸಂಸ್ಥೆಗೆ ಇಂದು ನಿವೇದಿತಾ ತಂದುಕೊಟ್ಟ ರ್‍ಯಾಂಕ್ ದೇವಸ್ಥಾನಕ್ಕೆ ಕಳಸವಿಟ್ಟಂತಾಗಿದೆ. ಶಿಕ್ಷಕರ ಶ್ರಮಕ್ಕೆ ಧನ್ಯವಾದ ಹೇಳುತ್ತಾ, ನಿವೇದಿತಾ ಸಾಧನೆ ನಮ್ಮ ಶಾಲೆಯ ಗ್ರಾಮದ ಮಕ್ಕಳಿಗಷ್ಟೇ ಅಲ್ಲ, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಮಾದರಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಸೆ ಎಂದು ಸ್ಪಂದನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ವೈ.ಎಚ್. ಕುಡಪಲಿ ಹೇಳಿದರು.