ಕನ್ನಡಪ್ರಭ ವಾರ್ತೆ ತಿಪಟೂರು
ನಗರದಿಂದ ತುರುವೇಕೆರೆ ಹಾಗೂ ಚನ್ನರಾಯಪಟ್ಟಣ ಕಡೆಗೆ ಹೋಗುವ ವೈ.ಟಿ. ರಸ್ತೆಯ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕಳೆದ ಒಂದು ತಿಂಗಳಿನಿಂದಲೂ ಮಳೆ ಹಾಗೂ ಕೊಳಚೆ ನೀರು ಶೇಖರಣೆಯಾಗಿ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ರೈಲ್ವೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ನಗರಸಭೆಯವರು ಕೂಡಲೇ ಕ್ರಮ ಕೈಗೊಳ್ಳಬೇಕಿದೆ.ನಗರದ ಮುಖ್ಯ ರಸ್ತೆಯಾಗಿರುವ ಈ ರಸ್ತೆ ತುರುವೇಕೆರೆ, ಯಡಿಯೂರು, ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೋ ಸೇರಿದಂತೆ ದ್ವಿಚಕ್ರ ವಾಹನಗಳು ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ಇಲ್ಲಿನ ಪ್ರಸಿದ್ಧ ಕೊಬ್ಬರಿ ಮಾರುಕಟ್ಟೆಗೆ ಸಂಪರ್ಕ ಇರುವುದರಿಂದ ಮಾರುಕಟ್ಟೆಗೆ ಸಾಕಷ್ಟು ವಾಹನಗಳು ಬಂದು ಹೋಗುತ್ತವೆ.
ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರಗಳಾದ ಕೆರೆಗೋಡಿ-ರಂಗಾಪುರ ಹಾಗೂ ದಸರೀಘಟ್ಟ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಇದೇ ರಸ್ತೆಯಲ್ಲಿ ಹೋಗಬೇಕು. ಆದರೆ ರೈಲ್ವೆ ಅಂಡರ್‌ಪಾಸ್ ಬಳಿ ವಿವಿಧ ಭಾಗಗಳಿಂದ ಬರುವ ಚರಂಡಿ ಕೊಳಚೆ ನೀರು ಹಾಗೂ ಮಳೆ ನೀರು ಸರಾಗವಾಗಿ ಹರಿಯಲೆಂದು ನಿರ್ಮಿಸಿರುವ ಈ ಸೇತುವೆ ಅವೈಜ್ಞಾನಿಕವಾಗಿರುವುದರಿಂದ ಕೊಳಚೆ ನೀರು ಹೆಚ್ಚು ಶೇಖರಣೆಯಾಗುತ್ತಿದೆ. ವಾಹನಗಳು ಓಡಾಡುವಾಗ ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ ಕೊಳಚೆ ನೀರು ಸಿಡಿಯುತ್ತಿದ್ದು ಪ್ರತಿನಿತ್ಯ ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಇಲ್ಲಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ನೀರು ಶೇಖರಣೆಯಾಗಿರುವುದರಿಂದ ಗುಂಡಿಗಳು ಎಲ್ಲಿವೆ ಎಂದು ತಿಳಿಯದೆ ವಾಹನ ಸವಾರರು ಎದ್ದು ಬಿದ್ದು ಹೋಗುತ್ತಿದ್ದಾರೆ. ರಾತ್ರಿ ವೇಳೆಯಂತೂ ಇಲ್ಲಿ ಓಡಾಡುವುದೇ ಕಷ್ಟಕರವಾಗಿದೆ.ತಿಪಟೂರು ಜಿಲ್ಲೆಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಇಂತಹ ಪ್ರಮುಖ ರಸ್ತೆಗಳಲ್ಲಿನ ಸಮಸ್ಯೆಗಳೇ ಕಪ್ಪುಚುಕ್ಕಿಯಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ.