ಬಸ್, ರಸ್ತೆ ಸಮಸ್ಯೆ ಪರಿಹಾರಕ್ಕೆ ಒತ್ತಾಯ

KannadaprabhaNewsNetwork |  
Published : May 15, 2026, 02:15 AM IST
ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮದೊಳಗೆ ಬಸ್ ಸಂಚಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ತಹಸೀಲ್ದಾರ್ ಜೂಗಲ ಮಂಜುನಾಯಕರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ನಂ.10 ಮುದ್ದಾಪುರ ಗ್ರಾಮದೊಳಗೆ ಸಂಚರಿಸದೇ ಸರ್ಕಾರಿ ಡಿಪ್ಲೋಮಾ ಕಾಲೇಜು ಮುಂಭಾಗದಿಂದಲೇ ತೆರಳುತ್ತಿವೆ.

ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದೊಳಗೆ ಸರ್ಕಾರಿ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಜೂಗಲ ಮಂಜುನಾಯಕರಿಗೆ ಮನವಿ ಸಲ್ಲಿಸಿದರು.

ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿರುಪಾಕ್ಷಿ ಯಾದವ್ ಮಾತನಾಡಿ, ಕುರುಗೋಡು ಡಿಪೋಗೆ ಸೇರಿದ ಹಲವು ಬಸ್‌ಗಳು ನಂ.10 ಮುದ್ದಾಪುರ ಗ್ರಾಮದೊಳಗೆ ಸಂಚರಿಸದೇ ಸರ್ಕಾರಿ ಡಿಪ್ಲೋಮಾ ಕಾಲೇಜು ಮುಂಭಾಗದಿಂದಲೇ ತೆರಳುತ್ತಿವೆ. ಇದರಿಂದ ಗ್ರಾಮದ ವಿದ್ಯಾರ್ಥಿಗಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ದಿನನಿತ್ಯ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.

ಗ್ರಾಮದ ವಿದ್ಯಾರ್ಥಿಗಳು ಶಾಲೆ ಹಾಗೂ ಕಾಲೇಜುಗಳಿಗೆ ತೆರಳಲು ದೂರ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಾರಿಗೆ ಸೌಲಭ್ಯ ಕೊರತೆಯಿಂದ ಗ್ರಾಮಸ್ಥರಿಗೆ ಅನಾನುಕೂಲ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕುರುಗೋಡು ಡಿಪೋದ ಅಧಿಕಾರಿಗಳು ನಮೂನೆ-4ರಲ್ಲಿ ನಂ.10 ಮುದ್ದಾಪುರ ಗ್ರಾಮದ ಹೆಸರನ್ನು ಸೇರಿಸಿ, ನಿಯಮಿತವಾಗಿ ಬಸ್ಸುಗಳು ಗ್ರಾಮದೊಳಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಗ್ರಾಮದ ರಸ್ತೆ ಸುರಕ್ಷತೆ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಅವರು, ಗ್ರಾಮದಲ್ಲಿ ವೇಗತಡೆಗಳು ಹಾಗೂ ರಸ್ತೆ ಸುರಕ್ಷತಾ ಸೂಚನಾ ಫಲಕಗಳಿಲ್ಲದ ಕಾರಣ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿವೆ. ಇದರಿಂದ ಅಪಘಾತ ಸಂಭವಿಸುವ ಭೀತಿ ಹೆಚ್ಚಾಗಿದೆ. ಗ್ರಾಮದ ಪ್ರಮುಖ ಮೂರು ಕಡೆಗಳಲ್ಲಿ ವೇಗತಡೆಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸಿ ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕು ಎಂದು ಆಗ್ರಹಿಸಿದರು.

ಸಿದ್ದೇಶ್ವರ ಕ್ರಾಸ್‌ನಿಂದ ನಂ.10 ಮುದ್ದಾಪುರ ಗ್ರಾಮದವರೆಗೆ ಇರುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆಗಾಲದಲ್ಲಿ ರಸ್ತೆ ಸಂಚಾರಕ್ಕೆ ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ರಸ್ತೆ ಗುಂಡಿಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದು, ಕೂಡಲೇ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯ ಕರುನಾಡ ರಕ್ಷಣಾ ವೇದಿಕೆಯ ತಾಲೂಕು ಗೌರವಾಧ್ಯಕ್ಷ ಎಸ್.ಗೋಪಾಲ ಯಾದವ್, ತಾಲೂಕು ಅಧ್ಯಕ್ಷ ಜೆ.ಶಿವಕುಮಾರ್, ನಗರ ಅಧ್ಯಕ್ಷ ಕೆ.ಶಬ್ಬೀರ್, ನಂ.10 ಮುದ್ದಾಪುರ ಗ್ರಾಮ ಅಧ್ಯಕ್ಷ ಎ.ಅನಿಲ್‌ಕುಮಾರ್ ಹಾಗೂ ಪದಾಧಿಕಾರಿಗಳಾದ ವೈ.ಯಲ್ಲಪ್ಪ, ಬಿ.ದೊಡ್ಡಬಸಪ್ಪ, ಎ.ಮಂಜುನಾಥ, ಯು.ಎಸ್.ನಾಗರಾಜ, ರಾಘವೇಂದ್ರ, ಎ.ಪ್ರವೀಣ್, ಕೆ.ಈರಮ್ಮ, ರೇಣುಕಮ್ಮ, ಯಲ್ಲಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪ್ರಾಪ್ತರ ಮದುವೆ ತಡೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ
ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ