ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ಗಾಗಿ ಆಗ್ರಹ

KannadaprabhaNewsNetwork |  
Published : May 12, 2024, 01:20 AM IST
ಬಿರುಗಾಳಿಯಿಂದ ನಷ್ಟ ಹೊಂದಿರುವ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ಗಾಗಿ ಪ್ರತಿಭಟನೆ | Kannada Prabha

ಸಾರಾಂಶ

ಬಿರುಗಾಳಿಯಿಂದ ನಷ್ಟ ಹೊಂದಿರುವ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ಗಾಗಿ ಹಾಗೂ ಸರ್ಕಾರದ ಷರತ್ತು ವಿರೋಧಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಿರುಗಾಳಿಯಿಂದ ನಷ್ಟ ಹೊಂದಿರುವ ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ಗಾಗಿ ಹಾಗೂ ಸರ್ಕಾರದ ಷರತ್ತು ವಿರೋಧಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರಾಜ್ಯಾಧ್ಯ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮೈಸೂರು, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಎಕರೆ ಪ್ರದೇಶ ತೀವ್ರ ಬಿರುಗಾಳಿಯಿಂದ ನಾಶವಾಗಿದೆ. ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ರೈತರ ಸಮಸ್ಯೆಗಳನ್ನು ಆಲಿಸುವಲ್ಲಿ ಹಾಗೂ ಚುನಾಯಿತ ಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ರೈತರ ಬೆಳೆ ನಷ್ಟ ಅಂದಾಜು ಮಾಡುವಲ್ಲಿ ವಿಫಲರಾಗಿದ್ದಾರೆ ಎಂದರು.

ನಷ್ಟ ಹೊಂದಿರುವ ಬೆಳೆ ಸಮೀಕ್ಷೆಯ ಬಗ್ಗೆ ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ನೊಂದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರದ ಹಂತದಲ್ಲಿ ವಿಫಲರಾಗಿದ್ದಾರೆ. ರೈತರು ಜಾಗೃತರಾಗಿ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜಿಲ್ಲಾಡಳಿತ ಸಮರ್ಪಕ ವರದಿ ತಯಾರಿಸಿ ವಿಶೇಷ ಪ್ಯಾಕೇಜ್‌ಗೆ ವರದಿ ಸಲ್ಲಿಸಬೇಕು ಎಂದರು.ಜಿಲ್ಲಾ ಮಂತ್ರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಈ ಜವಾಬ್ದಾರಿಯನ್ನು ತೆಗೆದುಕೊಂಡು ಸಂಬಂಧಪಟ್ಟ ಸಚಿವರ ಜೊತೆ, ಸಿಎಂ ಜೊತೆ ರೈತರಿಗೆ ನ್ಯಾಯ ಕೊಡಿಸುವಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಪ್ರತಿ ಎಕರೆಗೆ ಸುಮಾರು ಒಂದು ಲಕ್ಷ ರು. ಬೆಳೆ ನಷ್ಟ ನೀಡಬೇಕು.

ಜಿಲ್ಲೆಯಲ್ಲಿ ಬರ ಪರಿಹಾರ ವಿತರಣೆಯಲ್ಲಿ ಷರತ್ತುಗಳನ್ನು ಹಾಕಿ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯವಾಗುತ್ತಿದೆ. ನಿರ್ದಿಷ್ಟ ಬೆಳೆಗಳಿಗೆ ಮಾತ್ರ ಹೋಬಳಿವಾರು ಬೆಳೆ ನಷ್ಟ ನೀಡುತ್ತಿರುವುದರಿಂದ ನೊಂದ ರೈತರಿಗೆ ಬೆಳೆ ನಷ್ಟ ಸಿಗುತ್ತಿಲ್ಲ ಆದುದರಿಂದ ಯಾವುದೇ ತಾರತಮ್ಯ ಷರತ್ತುಗಳಿಲ್ಲದೆ ಬರ ಪರಿಹಾರವನ್ನು ಎಲ್ಲರಿಗೂ ಹಂಚಬೇಕು. ಹೊಸ ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು ಮತ್ತು ರಾಜ್ಯ ಸರ್ಕಾರ ಬರದಲ್ಲಿ ನೊಂದಿರುವ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ೧೦ ರು. ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು. ಸಮರ್ಪಕವಾಗಿ ೧೦ ಗಂಟೆ ಹಗಲು ವೇಳೆ ವಿದ್ಯುತ್ ನೀಡಬೇಕು. ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳು ಕೃಷಿಗೆ ಸಾಲವನ್ನು ನೀಡಿ ಸಾಲದ ಮೊತ್ತಕ್ಕೆ ಟ್ರ್ಯಾಕ್ಟರ್ ಮತ್ತು ಮತ್ತಿತರ ಕೃಷಿ ಯಂತ್ರೋಪಕರಣಗಳನ್ನು ಜಪ್ತಿ ಮಾಡಿ ನಂತರ ಹೊರ ರಾಜ್ಯಗಳಲ್ಲಿ ಪ್ರಕರಣ ದಾಖಲಿಸವುದನ್ನು ನಿಲ್ಲಿಸಬೇಕು. ಕೃಷಿ ಸಂಬಂಧಿತ ಸಾಲಕ್ಕೆ ಸಿವಿಲ್ ಸ್ಕೋರ್ ಪರಿಗಣನೆಯನ್ನು ಕೈಬಿಡಬೇಕು ಹಾಗೂ ಕಬ್ಬು ಬೆಳೆಗಾರರಿಗೆ ಬರಬೇಕಾದ ೯೦೦ ಕೋಟಿ ರು.ಗಳನ್ನು ಲಾಭಾಂಶವನ್ನು ರೈತರಿಗೆ ಹಂಚಿಕೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಿಯೂರು ಹರ್ಷ, ರವಿ ಅರಳಿಕಟ್ಟೆ, ಕುಮಾರ್ ಉಡಿಗಾಲ, ಮಂಜುನಾಥ್, ಗುರುಮಲ್ಲಪ್ಪ, ಮಹದೇವಸ್ವಾಮಿ, ಚೇರ್ಮನ್ ಗುರು, ಮಾದೇಶ್, ಜಗ, ರಾಜು, ಸೂರ್ಯ, ಬಸವರಾಜಪ್ಪ, ಮಹೇಂದ್ರ, ಸತೀಶ್, ಅರಳಿಕಟ್ಟೆ ಪ್ರಭುಸ್ವಾಮಿ, ಸಿದ್ದಲಿಂಗಪ್ಪ, ಸಿದ್ದಪ್ಪ, ಮಹೇಶ್‌, ಚಿಕ್ಕಸ್ವಾಮಿ ಮಂಜುನಾಥ್, ವಿಶ್ವನಾಥ್, ನಾಗೇಂದ್ರ, ಚಂದ್ರು, ಪ್ರಸಾದ್, ವಿನಯ್ ಸ್ವಾಮಿ, ಆನಂದ, ಸುರೇಶ್, ಶಾಂತರಾಜು, ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''