ರೈತರು ಮೇವು ಬ್ಯಾಂಕ್ ಸದ್ಬಳಕೆ ಮಾಡಿಕೊಳ್ಳಿ

KannadaprabhaNewsNetwork | Published : May 12, 2024 1:20 AM

ಸಾರಾಂಶ

ತಾಲೂಕಿನಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರಾರಂಭಿಸಲಾಗಿರುವ ಮೇವು ಬ್ಯಾಂಕಿಗೆ ಚಾಲನೆ ನೀಡಲಾಯಿತು. ಮಾಯಸಂದ್ರ ಟಿ.ಬಿ ಕ್ರಾಸಿನಲ್ಲಿರುವ ಶ್ರೀ ಚುಂಚಾದ್ರಿ ರೈತ ಸಂತೆ ಆವರಣದಲ್ಲಿ ಅಧಿಕೃತವಾಗಿ ಮೇವು ಬ್ಯಾಂಕ್‌ ಆರಂಭಿಸಲಾಯಿತು

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ಬರಗಾಲ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರಾರಂಭಿಸಲಾಗಿರುವ ಮೇವು ಬ್ಯಾಂಕಿಗೆ ಚಾಲನೆ ನೀಡಲಾಯಿತು. ಮಾಯಸಂದ್ರ ಟಿ.ಬಿ ಕ್ರಾಸಿನಲ್ಲಿರುವ ಶ್ರೀ ಚುಂಚಾದ್ರಿ ರೈತ ಸಂತೆ ಆವರಣದಲ್ಲಿ ಅಧಿಕೃತವಾಗಿ ಮೇವು ಬ್ಯಾಂಕ್‌ ಆರಂಭಿಸಲಾಯಿತು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮತ್ತು ತಾಲೂಕು ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣಸಿದ್ದಪ್ಪ ಮೇವು ಬ್ಯಾಂಕ್ ಗೆ ಚಾಲನೆ ನೀಡಿದರು. ಶ್ರೀ ಚುಂಚಾದ್ರಿ ರೈತ ಸಂತೆಯಲ್ಲಿ ನಡೆದ ಮೇವು ಬ್ಯಾಂಕ್ ನಲ್ಲಿ ಒಟ್ಟು ೩೩೦ ರಾಸುಗಳಿಗೆ ೭೫ ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಇದರ ಅನ್ವಯ ೧೪ ಟನ್ ಮೇವನ್ನು ವಿತರಿಸಲಾಯಿತು.

ಪ್ರಸನ್ನನಾಥ ಸ್ವಾಮಿ ಮಾತನಾಡಿ, ಸರ್ಕಾರ ಉತ್ತಮ ನಿರ್ಧಾರ ಮಾಡಿದೆ. ಮಳೆ ಇಲ್ಲದೇ ಜಾನುವಾರುಗಳಿಗೆ ಮೇವಿನ ಕೊರತೆ ಕಂಡುಬಂದಿತ್ತು. ಸಕಾಲದಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸುವ ನಿರ್ಧಾರ ಸ್ವಾಗತಾರ್ಹವಾಗಿದೆ. ರೈತರು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಂಡು ರಾಸುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕೆಂದು ಕರೆ ನೀಡಿದರು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಈಗ ಮಾಯಸಂದ್ರದಲ್ಲಿ ಇಂದಿನಿಂದ ಮೇವು ಬ್ಯಾಂಕ್ ಪ್ರಾರಂಭಿಸಲಾಗಿದೆ. ಸೋಮವಾರ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿಯಲ್ಲಿ ಪ್ರಾರಂಭ ಮಾಡಲಾಗುವುದು. ರೈತಾಪಿಗಳು ಮೇವು ಬ್ಯಾಂಕ್ ವ್ಯವಸ್ಥಿತವಾಗಿ ನಡೆಯಲು ಸಹಕರಿಸುವಂತೆ ಮನವಿ ಮಾಡಿಕೊಂಡರು. ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಪ್ಪ ಮಾತನಾಡಿ, ಒಂದು ರಾಸುವಿಗೆ ಪ್ರತಿ ದಿನಕ್ಕೆ ೬ ಕೆಜಿಯಂತೆ ವಾರಕ್ಕೆ ಆಗುವಷ್ಟು ಮೇವನ್ನು ಒಂದೇ ಬಾರಿ ನೀಡಲಾಗುವುದು. ರೈತಾಪಿಗಳು ತಮ್ಮಲ್ಲಿರುವ ರಾಸುವಿನ ಲೆಕ್ಕದಲ್ಲಿ ಮೇವನ್ನು ಪಡೆಯಬಹುದು. ಪ್ರತಿ ಕೆಜಿ ಮೇವಿಗೆ ೨ ರು.ಯಂತೆ ಶುಲ್ಕ ವಿಧಿಸಲಾಗುತ್ತದೆ. ವಾರದ ನಂತರ ಪುನಃ ರೈತರು ತಮಗೆ ನೀಡಲಾಗಿರುವ ದಾಖಲೆಯನ್ನು ತಂದು ಮೇವನ್ನು ಖರೀದಿಸಬಹುದು. ಪ್ರತಿ ಪಶುಕೇಂದ್ರಗಳಿಂದ ಪ್ರತಿ ದಿನ ಗರಿಷ್ಠ ೩೦ ರೈತರಿಗೆ ಮೇವು ವಿತರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ರೈತರು ತಮಗೆ ನಿಗದಿಪಡಿಸುವ ದಿನದಂದು ಮೇವು ಬ್ಯಾಂಕಿಗೆ ಆಗಮಿಸಿ ಮೇವನ್ನು ಪಡೆಯಬೇಕೆಂದು ಸೂಚಿಸಿದರು.

ಇಒ ಶಿವರಾಜಯ್ಯ, ಪಶು ವೈದ್ಯ ಅಧಿಕಾರಿಗಳಾದ ಡಾ.ಪುಟ್ಟರಾಜು, ಡಾ.ಮಹೇಶ್, ಡಾ.ತೇಜಸ್ವಿನಿ, ಜಾನುವಾರು ಅಭಿವೃದ್ಧಿ ಅಧಿಕಾರಿಗಳಾದ ಜೆ.ಸಿದ್ದಪ್ಪ, ಕಿರಿಯ ಪಶು ವೈದ್ಯ ಪರೀಕ್ಷಕರಾದ ವೀರೇಂದ್ರ, ಕಂದಾಯ ನಿರೀಕ್ಷಣಾಧಿಕಾರಿ ಎಂ.ಆರ್.ಮಂಜುನಾಥ್ ಹಾಗೂ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

Share this article