ಹಳ್ಳ ಹೂಳೆತ್ತುವ ಕಾಮಗಾರಿ ತ್ವರಿತವಾಗಿ ಮುಗಿಸಲು ಆಗ್ರಹ

KannadaprabhaNewsNetwork |  
Published : May 23, 2024, 01:02 AM IST
ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು. | Kannada Prabha

ಸಾರಾಂಶ

ಬುಧವಾರ ಸಂಜೆ ಕೆಲಸ ನಡೆಯುವ ಸ್ಥಳಕ್ಕೆ ಜನರು ಆಗಮಿಸಿ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಗೋಕರ್ಣ: ಚಿಕ್ಕ ನೀರಾವರಿ ಇಲಾಖೆಯಿಂದ ಇಲ್ಲಿನ ಮಲ್ಲನ ಓಣಿಯ ಹಳ್ಳದ ಹೂಳೆತ್ತುವ ಕಾಮಗಾರಿ ಕುಂಟುತ್ತಾ ಸಾಗಿದ್ದು, ಒಮ್ಮೆ ಪ್ರಾರಂಭಿಸಿ ಮತ್ತೆ ನಿಲ್ಲಿಸುತ್ತಿದ್ದು, ಮಳೆ ಬಂದರೆ 400ಕ್ಕೂ ಹೆಚ್ಚು ಮನೆ ಮುಳುಗುವ ಆತಂಕವಿದ್ದು, ತಕ್ಷಣ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ಕೆಲಸ ತ್ವರಿತವಾಗಿ ಮಾಡಬೇಕು. ಇಲ್ಲವಾದರೆ ಮುಂದಿನ ಬೇಸಿಗೆಯಲ್ಲಿ ಪ್ರಾರಂಭಿಸುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಈ ಕುರಿತು ಬುಧವಾರ ಸಂಜೆ ಕೆಲಸ ನಡೆಯುವ ಸ್ಥಳಕ್ಕೆ ಜನರು ಆಗಮಿಸಿ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಫೆಬ್ರವರಿಯಲ್ಲಿ ಆರಂಭವಾಗಬೇಕಿದ್ದ ಕೆಲಸವನ್ನು ಮಳೆಗಾಲ ಹತ್ತಿರ ಬರುತ್ತಿರುವಂತೆ ಪ್ರಾರಂಭಿಸಿದ್ದಿರಿ. ಹೂಳು ತೆಗೆಯಲು ಜೆಸಿಬಿ ಇಳಿಸಲು ಹಳ್ಳಕ್ಕೆ ಮಣ್ಣು ತುಂಬಿದ್ದು, ಇದರಿಂದ ಮಳೆ ಬಂದರೆ ಜಡಕಂಬಿ ಸೇರಿದಂತೆ ವಿವಿಧ ತಗ್ಗಿನ ವಸತಿ ಪ್ರದೇಶ ಸಂಪೂರ್ಣ ಜಲಮಯವಾಗಲಿದೆ.

ನಮ್ಮ ಮನೆ, ಕೃಷಿ ಭೂಮಿ ನಾಶವಾಗಲಿದೆ. ಇದಕ್ಕೆ ಯಾರು ಹೊಣೆ ಎಂದು ಪಟ್ಟು ಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ವಾರ್ಡ್‌ ಸದಸ್ಯ ಮಂಜುನಾಥ ಜನ್ನು ಮಾತನಾಡಿ, ಕೆಲಸದ ಬಗ್ಗೆ ಸಾಕಷ್ಟು ಬಾರಿ ತಿಳಿಸಿ ತ್ವರಿತವಾಗಿ ಮುಗಿಸುವಂತೆ ಹೇಳಿದ್ದೇನೆ. ಆದರೂ ನಿರ್ಲಕ್ಷ್ಯ ಮಾಡಿದ್ದಿರಿ. ಮಳೆ ಬಂದು ನೀರು ನಿಂತರೆ ದೊಡ್ಡ ಅವಘಡವೇ ಸಂಭವಿಸಲಿದ್ದು, ಅದಕ್ಕೆ ಇಲಾಖೆಯೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.ಇದಕ್ಕೆ ಕೆಲಸದ ಉಸ್ತುವಾರಿ ನೋಡುತ್ತಿರುವ ಸತೀಶ ಮಾತನಾಡಿ, ಹೆಚ್ಚಿನ ಯಂತ್ರ ಹಾಗೂ ಮಣ್ಣು ಸಾಗಿಸಲು ಟಿಪ್ಪರ್ ತರಿಸಿ ಆ ದಿನ ತೆಗೆದ ಹೂಳನ್ನು ಅವತ್ತೆ ಎತ್ತುವಳಿ ಮಾಡಿ ನೀರು ನಿಲ್ಲದಂತೆ ನೋಡಿಕೊಳ್ಳುತ್ತೇವೆ ಎಂದರು.

ಆದರೆ ಜನರು ಈ ಉತ್ತರಕ್ಕೆ ಪ್ರತಿಕ್ರಿಯಿಸಿ, ಈ ಹಿಂದೆ ಕೆಲಸ ಮಾಡುವಾಗಲೂ ಹೀಗೆ ಹೇಳಿದ್ದೀರಿ. ಯಾವುದೇ ಕೆಲಸವಾಗಿಲ್ಲ. ನಿಮ್ಮ ಮೇಲೆ ವಿಶ್ವಾಸವಿಲ್ಲ ಎಂದರು.

ರಾತ್ರಿ ವೇಳೆಯು ಕೆಲಸ ಮಾಡುತ್ತೇವೆ. ಒಂದು ದಿನ ನೋಡಿ ಎಂದು ಗುತ್ತಿಗೆದಾರರು ಹೇಳಿದಾಗ ಅದರಂತೆ ಗುರುವಾರದವರೆಗೆ ಕಾದು ನೋಡುವುದಾಗಿ ಸ್ಥಳೀಯರು ಹೇಳಿದರು.

ಗುರುವಾರದ ನಂತರವೂ ಇದೇ ರೀತಿ ಮುಂದುವರಿದರೆ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸುವುದಾಗಿ ಇಲ್ಲಿನ ನಿವಾಸಿಗಳು ಹೇಳಿದ್ದಾರೆ.

ಈ ವೇಳೆ ಸ್ಥಳೀಯರಾದ ಮಾಣೇಶ್ವರ ಗೌಡ, ಗಣಪತಿ ಗೌಡ, ಅನಂತ ಗೌಡ, ಗ್ರಾಪಂ ಸದಸ್ಯ ಗಣಪತಿ ನಾಯ್ಕ, ಈ ಭಾಗದ ಮಹಿಳೆಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.ಆತಂಕಗೊಂಡ ನಿವಾಸಿಗಳು: ಹಾಲಕ್ಕಿ ಒಕ್ಕಲಿಗ ಮತ್ತು ಅಂಬಿಗ ಸಮಾಜದವರು ಈ ಹಳ್ಳದ ಸುತ್ತಲಿನಲ್ಲಿ ವಾಸವಿದ್ದು, ಮಂಗಳವಾರ ಸುರಿದ ಭಾರಿ ಮಳೆಯಿಂದ ಮನೆಗೆ ನೀರು ನುಗ್ಗುವ ಆತಂಕ ಎದುರಾಗಿದ್ದು, ರಾತ್ರಿ ನಿದ್ದೆ ಮಾಡದೆ ಭಯದಲ್ಲೆ ಕಾಲ ಕಳೆದಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಚಿಕ್ಕ ಮನೆಗಳೆ ಹೆಚ್ಚಿದ್ದು, ಅಲ್ಪ ಪ್ರಮಾಣದಲ್ಲಿ ನೀರು ಬಂದರೂ ನೆಲಸಮವಾಗಲಿದೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!