ಕನ್ನಡಪ್ರಭ ವಾರ್ತೆ ಕುಶಾಲನಗರ
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ ಸರ್ಕಾರ ಘೋಷಣೆ ಮಾಡಿರುವ ಎರಡು ಕೋಟಿ ರು.ಗಳ ಯೋಜನೆಯನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಗ್ರಹಿಸಿದ್ದಾರೆ.ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸಂಘದ ಬೆಳ್ಳಿ ಹಬ್ಬದ ಅಂಗವಾಗಿ ಏರ್ಪಡಿಸಲಾದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ಮತ್ತು ಓದುಗರ ನಡುವೆ ಪ್ರಮುಖ ಪಾತ್ರ ವಹಿಸುವ ಪತ್ರಿಕಾ ವಿತರಕರು ಹಲವು ಸಮಸ್ಯೆಗಳೊಳಗೆ ಕಾಯಕ ನಿರ್ವಹಿಸುತ್ತಿದ್ದು, ಆದ್ಯತೆ ಮೇರೆಗೆ ಅವರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದರು.ಕಳೆದ ಎರಡು ದಶಕಗಳಿಗೆ ಹೋಲಿಸಿದರೆ ಪತ್ರಿಕೆಗಳ ವಿತರಣೆ ಸಂಖ್ಯೆ ಹೆಚ್ಚಾಗಿದ್ದರೂ ಓದುಗರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ. ಕೊರೋನಾ ಸಂದರ್ಭ ಹಾಗೂ ನಂತರದ ದಿನಗಳಲ್ಲಿ ಕಾಸ್ಟ್ ಕಟ್ಟಿಂಗ್ ಹೆಸರಿನಲ್ಲಿ ದಿನಪತ್ರಿಕೆಗಳು ಆದ್ಯತಾ ಪಟ್ಟಿಯಿಂದ ಹೊರಗೆ ಉಳಿದಿವೆ ಎಂದ ಅವರು ಮನೆಮನೆಗಳಿಗೆ ಪತ್ರಿಕೆ ತಲುಪದಿದ್ದಲ್ಲಿ ಓದುಗರು ತೆರಳಿ ಖರೀದಿಸಲು ಮುಂದಾಗುವುದಿಲ್ಲ.
ಮುಂದಿನ ಪೀಳಿಗೆಯಲ್ಲಿ ನಿರಾಸಕ್ತಿ ಕಾರಣ ಪತ್ರಿಕಾ ವಿತರಕರ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದರು.ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ಪತ್ರಿಕಾ ವಿತರಕರದ್ದು ನಿಸ್ವಾರ್ಥ ಸೇವೆ, ಅತ್ಯಂತ ಜವಾಬ್ದಾರಿಯ ಸಮಯ ಪ್ರಜ್ಞೆಯಿಂದ ಬಿಸಿಲು ಮಳೆ ಚಳಿಯಲ್ಲಿ ಶ್ರಮದ ಕಾರ್ಯನಿರ್ವಹಿಸುವ ಈ ವರ್ಗವನ್ನು ಅತ್ಯವಶ್ಯವಾಗಿ ಗುರುತಿಸಿ ಗೌರವಿಸುವುದು ಆದ್ಯ ಕರ್ತವ್ಯ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪತ್ರಿಕಾ ವಿತರಣೆ ಕಾರ್ಯ ಅತ್ಯಂತ ಸಾಹಸ ಮಯ ಕೆಲಸವಾಗಿದೆ. ಬೀದಿ ನಾಯಿಗಳ ಹಾವಳಿ ನಡುವೆ ಪತ್ರಿಕೆ ವಿತರಕರು ತಮ್ಮ ಜೀವವನ್ನು ಕಾಪಾಡುವುದರೊಂದಿಗೆ ವಿತರಣೆ ಮಾಡಿದ ಪತ್ರಿಕೆಗಳ ಶುಲ್ಕ ವಸೂಲಿ ಮಾಡುವುದು ಕೂಡ ಅತ್ಯಂತ ದುಸ್ತರ ಕೆಲಸವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕ ಮಾತನಾಡಿ, ಪತ್ರಿಕಾ ವಿತರಕರ ಶ್ರಮವನ್ನು ಎಲ್ಲರೂ ಮನಗಾಣಬೇಕಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳು ಆಡಳಿತ ವ್ಯವಸ್ಥೆಯಿಂದ ವಿತರಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದರು.ಪತ್ರಿಕಾ ಏಜೆಂಟರಾದ ಕುಶಾಲನಗರದ ಚಂದ್ರಪ್ಪ, ವಿ ಪಿ ಸುಕೇಶ್, ಆರ್ ಕೃಷ್ಣ ಮತ್ತು ಬಿ ಸತ್ಯ ಹಾಗೂ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ ಮತ್ತು ತಾಲೂಕು ಸಂಘದ ಅಧ್ಯಕ್ಷ ಎಂ ಎನ್ ಚಂದ್ರಮೋಹನ್ ಅವರನ್ನು ಗೌರವಿಸಲಾಯಿತು.
ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಹೆಬ್ಬಾಲೆ ರಘು ಮಾತನಾಡಿದರು.ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ರೈ, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್, ಖಜಾಂಚಿ ಕುಡೆಕಲ್ ಗಣೇಶ್ ಕಾರ್ಯದರ್ಶಿ ನಾಗರಾಜ ಶೆಟ್ಟಿ, ನಿರ್ದೇಶಕರಾದ ಎಚ್.ವಿ. ವಿನೋದ್, ಶಶಿಕುಮಾರ್ ರೈ, ಕೆ ಜೆ ಶಿವರಾಜ್, ಸಮ್ಸುದ್ದೀನ್, ಇಸ್ಮಾಯಿಲ್ ಕಂಡಕೆರೆ ಮತ್ತು ಸಂಘದ ಸದಸ್ಯರು ಇದ್ದರು. ಕಾರ್ಯಕ್ರಮ ಸಂಚಾಲಕ ಟಿ.ಆರ್. ಪ್ರಭುದೇವ್ ನಿರೂಪಿಸಿದರು. ಸಹ ಸಂಚಾಲಕ ಜಯಪ್ರಕಾಶ್ ಸ್ವಾಗತಿಸಿದರು. ಮಹಮ್ಮದ್ ಮುಸ್ತಾಫ ವಂದಿಸಿದರು.