ಬ್ಯಾಡಗಿ: ಅರಣ್ಯ ಇಲಾಖೆಗೆ ಸೇರಿದ ತಾಲೂಕಿನ ಸಿದ್ದಾಪುರದ ಸುಮಾರು 44 ಎಕರೆ (ಬ ಖರಾಬ್) ಅರಣ್ಯ ಪ್ರದೇಶದಲ್ಲಿ ಬೆಳೆಸಲಾಗಿದ್ದ ಮರಗಿಡಗಳನ್ನು ಕಡಿದು ಅದೇ ಭೂಮಿಯನ್ನು ಸಾಗುವಳಿ ಮಾಡಲು ಮುಂದಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಚನ್ನಬಸಪ್ಪ ಮಲ್ಲಾಪೂರ, ತಾಲೂಕಿನಲ್ಲಿ ಅರಣ್ಯ ಪ್ರದೇಶಗಳನ್ನು ಒತ್ತುವರಿ ಮಾಡಿ ಸುಮಾರು 10ಕ್ಕೂ ಹೆಚ್ಚು ಜನರು ಅನಧಿಕೃತ ಸಾಗುವಳಿಗೆ ಮುಂದಾಗಿದ್ದಾರೆ. ಸದರಿ ಪ್ರದೇಶದಲ್ಲಿರುವ ಅರಣ್ಯದಿಂದ ಪರಿಸರ ಸೇರಿದಂತೆ ಬರುವ ಪೀಳಿಗೆಗೆ ಉತ್ತಮ ವಾತಾವರಣ ನೀಡುವುದು ಸರ್ಕಾರ ಸೇರಿದಂತೆ ಸಾರ್ವಜಜಿಕರ ಜವಾಬ್ದಾರಿಯಾಗಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ಮರಗಿಡಗಳನ್ನು ಕಡಿದು ಅದೇ ಭೂಮಿಯನ್ನು ಸಾಗುವಳಿ ಮಾಡಲು ಮುಂದಾಗಿರುವ ವಿಷಯವನ್ನು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ತಿಳಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ, ಬದಲಾಗಿ ನಮ್ಮ ವ್ಯಾಪ್ತಿಯ ಹೊರಗಿರುವ ವಿಷಯ ಎಂಬ ಹೇಳಿಕೆ ನೀಡುವ ಮೂಲಕ ನಿರ್ಲಕ್ಷ್ಯ ತೋರಿದ್ದಾರೆ. ಹಾಗಿದ್ದರೇ ಸರ್ಕಾರದ ಭೂಮಿಯನ್ನು ರಕ್ಷಣೆ ಮಾಡುವವರು ಯಾರು? ಎಂದು ಪ್ರಶ್ನಿಸಿದರು.ಎಷ್ಟು ದಿವಸ ಕಾವಲು ಕಾಯಬೇಕು: ಕುಬೇರಪ್ಪ ಕಚವಿ ಮಾನತಾಡಿ, ಸದರಿ ಅರಣ್ಯ ಇಲಾಖೆ ಭೂಮಿಯನ್ನು ಗ್ರಾಮದ ಜನರೇ ಎಲ್ಲರೂ ಸೇರಿ ಹಗಲು ರಾತ್ರಿಯನ್ನದೇ ಕಾಯ್ದುಕೊಳ್ಳುತ್ತಿದ್ದೇವೆ ಗ್ರಾಮಸ್ಥರಿಗೆ ಇರುವ ಕಾಳಜಿ ಅಧಿಕಾರಿಗಳಿಗೆ ಇಲ್ಲವೆನ್ನುವುದು ಬಹಳಷ್ಟು ನೋವಿನ ಸಂಗತಿ. ಹೀಗಾಗಿ ಗ್ರಾಮಸ್ಥರ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಇಲ್ಲಿರುವ ಅರಣ್ಯವನ್ನು ರಕ್ಷಿಸಿ ಗ್ರಾಮಸ್ಥರಿಗೆ ಉಳಿಸಿಕೊಳ್ಳುವ ಕೆಲಸವಾಗಬೇಕಾಗಿದೆ ಎಂದರು.ಎಫ್‌ಐಆರ್ ದಾಖಲಿಸಲು ಆಗ್ರಹ: ಬಸವಂತಪ್ಪ ಹೊಸ್ಮನಿ ಮಾತನಾಡಿ, ಅರಣ್ಯ ಮರಗಿಡಗಳನ್ನು ಕಡಿದು ಅರಣ್ಯ ಖಾಲಿಮಾಡುತ್ತಿರುವುದಲ್ಲದೇ, ಅರಣ್ಯ ಸಾಗುವಳಿ ಮಾಡಲು ಮುಂದಾಗಿರುವವರ ವಿರುದ್ಧ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ಬಾಳಂಬೀಡ, ಪ್ರಕಾಶ ಕರೆಮ್ಮನವರ, ಬಸವರಾಜ ಹೊಸ್ಮನಿ, ಶಿವರುದ್ರಪ್ಪ ಮೂಲಿಕೇರಿ, ಅಜ್ಜಪ್ಪ ತಿಳವಳ್ಳಿ, ರಾಜು ಹುಗ್ಗಿ, ಮಂಜುನಾಥ ಹುಗ್ಗಿ, ಮೂಕಪ್ಪ ತಿಳವಳ್ಳಿ, ಅಜ್ಜಪ್ಪ ತಳವಾರ, ಶಿವನಗೌಡ ಹುಗ್ಗಿ, ನಾಗರಾಜ ಹುಗ್ಗಿ, ಹರೀಶ ಹೊಸ್ಮನಿ, ಜಯಪ್ಪ ತಿಳವಳ್ಳಿ, ಈರಪ್ಪ ಪುಟ್ಟಣ್ಣನವರ ಹಾಗೂ ಇನ್ನಿತರಿದ್ದರು.ತಹಸೀಲ್ದಾರ್ ಅವರಿಗೆ ವರದಿ ಸಲ್ಲಿಸಿದ್ದೇನೆ: ಅಕ್ರಮ ಸಾಗುವಳಿ ಮಾಡುತ್ತಿದ್ದ ಶಂಭು ಅಂಗಡಿ, ಹೊನ್ನಪ್ಪ ರಾಮಗೊಂಡನಹಳ್ಳಿ, ಗಣೇಶ ಹರಿಜನ, ಮಾಲತೇಶ ಅಂಗಡಿ, ಯಲ್ಲಪ್ಪ ಕುಂಕುಮಗಾರ, ಮಹೇಶ ಹರಿಜನ, ಚನ್ನಬಸಯ್ಯ ಗೌರಾಪುರ, ಚಂದ್ರಪ್ಪ ಹರಿಜನ ಇವರ ವಿರುದ್ಧ ಮುಂದಿನ ಕ್ರಮಕ್ಕಾಗಿ ತಹಸೀಲ್ದಾರ್ ಅವರಿಗೆ ಲಿಖಿತ ವರದಿಯನ್ನು ಸಲ್ಲಿಸಿದ್ದೇನೆ ಎಂದು ಸಿದ್ದಾಪುರ ಗ್ರಾಮ ಆಡಳಿತಾಧಿಕಾರಿ ಮಲ್ಲಮ್ಮ ಗೋಣೆಜ್ಜನವರ ಹೇಳಿದರು.