ಕುಷ್ಟಗಿ: ಗೌರಿ ಹುಣ್ಣಿಮೆ ಬಂದರೆ ಸಾಕು ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸಡಗರ ಸಂಭ್ರಮ ಗರಿಗೆದರಿದ್ದು, ಸಕ್ಕರೆ ಆರತಿಗೆ ಬೇಡಿಕೆ ಹೆಚ್ಚಿದೆ.
ಪಟ್ಟಣ ಸೇರಿದಂತೆ ದೋಟಿಹಾಳ, ಕೇಸೂರು, ಮುದೇನೂರು, ತಾವರಗೇರಾ ಹಾಗೂ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಕೆಲವು ಮನೆಗಳಲ್ಲಿ ಮಾತ್ರ ಪ್ರತಿಷ್ಠಾಪಿಸುವ ಗೌರಮ್ಮನ ವಿಗ್ರಹಕ್ಕೆ ಗೌರಿ ಹುಣ್ಣಿಮೆ ಅಂಗವಾಗಿ ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವ ಮೂಲಕ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಾರೆ.ಸಕ್ಕರೆ ಗೊಂಬೆಗಳ ತಯಾರಿಕೆ ಒಂದು ಕಲೆ. ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆಯ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆ ಸಿದ್ಧವಾಗುತ್ತವೆ. ಗೊಂಬೆಗಳ ತಯಾರಿಕೆ ಕಲೆ ತಕ್ಷಣಕ್ಕೆ ಸಿದ್ಧಿಸುವುದು ವಿರಳ. ಇದಕ್ಕೆ ಅಪಾರ ಅನುಭವದ ಅಗತ್ಯವಿದೆ. ಪಾಕ ತಯಾರಿಕೆ ವಿಧಾನದಲ್ಲಿ ಮರೆತರೆ ಎಲ್ಲವೂ ನಾಶವಾಗಿ ಬಿಡುವ ಆತಂಕವೇ ಹೆಚ್ಚು.
ಮಾರುಕಟ್ಟೆಗೆ ಲಗ್ಗೆ:ಗೌರಿ ಹುಣ್ಣಿಮೆಗೆ ಇನ್ನೂ ನಾಲ್ಕೈದು ದಿನ ಬಾಕಿ ಇರುವಾಗಲೇ ಪಟ್ಟಣದ ಮಾರುಕಟ್ಟೆಗೆ ಸಕ್ಕರೆ ಆರತಿಗಳು ಲಗ್ಗೆ ಇಟ್ಟಿವೆ. ಸಕ್ಕರೆ ಗೊಂಬೆಯ ಆರತಿಗಳು ಕೆಜಿಗೆ ₹ 120ರಿಂದ ₹140 ಮಾರಾಟವಾಗುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಆರತಿಯ ಬೆಲೆ ಹೆಚ್ಚಿದೆ. ಹಬ್ಬದ ದಿನ 160ರವರೆಗೂ ಮಾರಾಟವಾಗಲಿದೆ ಎನ್ನುತ್ತಾರೆ ವ್ಯಾಪಾರಸ್ಥರು.ಸಂಪ್ರದಾಯ: ಮದುವೆ ಸಲುವಾಗಿ ಹೊಸದಾಗಿ ನಿಶ್ಚಯ ಮಾಡಿದ ಕನ್ಯೆಯ ಮನೆಗೆ ವರನ ಕಡೆಯವರು ಗೌರಿ ಹುಣ್ಣಿಮೆಯ ಅಂಗವಾಗಿ ಹೂವಿನ ದಂಡಿಯ ಜತೆಗೆ ಸಕ್ಕರೆ ಗೊಂಬೆ ತೆಗೆದುಕೊಂಡು ಬರುವ ಸಂಪ್ರದಾಯವಿದೆ. ಅವರವರ ಯೋಗ್ಯತೆಗೆ ತಕ್ಕಂತೆ ವರನ ಮನೆಯಿಂದ ಕೆಜಿ ಲೆಕ್ಕದಲ್ಲಿ ಸಕ್ಕರೆ ಗೊಂಬೆ ಜತೆ ಸೀರೆ, ಕುಪ್ಪಸ ಕೊಡುವುದು ಸಂಪ್ರದಾಯವೂ ಇಂದಿಗೂ ಮುಂದುವರಿದುಕೊಂಡು ಬಂದಿದೆ.
ನಮ್ಮ ಮನೆಯಲ್ಲಿ 60 ವರ್ಷದಿಂದ ಗೌರಿ ಹುಣ್ಣಿಮೆ ಅಂಗವಾಗಿ ಸಕ್ಕರೆ ಆರತಿ ಮಾಡಿಕೊಂಡು ಬಂದಿದ್ದು, ಲಾಭದ ನಿರೀಕ್ಷೆ ಇಟ್ಟುಕೊಳ್ಳದೆ ಸಂಪ್ರದಾಯ ಮುಂದುವರಿಕೆಯ ಸಲುವಾಗಿ ಮಾಡಲಾಗುತ್ತಿದೆ ಎಂದು ಕೇಸೂರಿನ ಆರತಿ ತಯಾರಕರಾದ ಶಶಿಕುಮಾರ ಆಲ್ವಿ ತಿಳಿಸಿದ್ದಾರೆ.ಗೌರಿ ಹುಣ್ಣಿಮೆ ಅಂಗವಾಗಿ ಸಕ್ಕರೆ ಆರತಿ ಮಾರಾಟ ಮಾಡಲಾಗುತ್ತಿದ್ದು, ಕೆಜಿಗೆ ₹120ಗಳಂತೆ ಮಾರಾಟ ಮಾಡುತ್ತಿದ್ದು, ಹಬ್ಬದ ದಿನದಂದು ₹160 ವರೆಗೂ ಮಾರಾಟ ಮಾಡಲಾಗುತ್ತದೆ ಎಂದು ಸಕ್ಕರೆ ಆರತಿ ವ್ಯಾಪಾರಿ ಪ್ರೇಮಲತಾ ತಿಳಿಸಿದ್ದಾರೆ.