ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಅಮಾನತಿಗೆ ಆಗ್ರಹ

KannadaprabhaNewsNetwork |  
Published : May 27, 2025, 12:49 AM IST
ಮಹೇಶ್ ಜೋಷಿಯವರ ಸರ್ವಾಧಿಕಾರಿ ಧೋರಣೆ ನಾಡಿನ ಕನ್ನಡಿಗರನ್ನು ಆತಂಕಕ್ಕೆ ದೂಡಿರುವುದನ್ನು ಖಂಡಿಸಿ ತನಿಖೆ ಆಗುವವರೆಗೂ ರಾಜ್ಯಾಧ್ಯಕ್ಷರ ಹುದ್ದೆಯಿಂದ ಅಮಾನತ್ತುಗೊಳಿಸಲು ಆಗ್ರಹ | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಮಹೇಶ್ ಜೋಷಿಯವರ ಸರ್ವಾಧಿಕಾರಿ ಧೋರಣೆ ನಾಡಿನ ಕನ್ನಡಿಗರನ್ನು ಆತಂಕಕ್ಕೆ ದೂಡಿರುವುದನ್ನು ಖಂಡಿಸಿ ಹಾಗೂ ತನಿಖೆ ಆಗುವವರೆಗೂ ರಾಜ್ಯಾಧ್ಯಕ್ಷರ ಹುದ್ದೆಯಿಂದ ಅಮಾನತುಗೊಳಿಸಲು ಆಗ್ರಹಿಸಿ ಹಾಸನ ಜನಪರ ಒಕ್ಕೂಟದ ಸಂಘಸಂಸ್ಥೆಗಳು ಇದೇ ತಿಂಗಳ ೨೮ನೇ ತಾರೀಖು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜನಪದ ವಿದ್ವಾಂಸ ಮೇಟಿಕರೆ ಹಿರಿಯಣ್ಣ ಮತ್ತು ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಮಹೇಶ್ ಜೋಷಿಯವರ ಸರ್ವಾಧಿಕಾರಿ ಧೋರಣೆ ನಾಡಿನ ಕನ್ನಡಿಗರನ್ನು ಆತಂಕಕ್ಕೆ ದೂಡಿರುವುದನ್ನು ಖಂಡಿಸಿ ಹಾಗೂ ತನಿಖೆ ಆಗುವವರೆಗೂ ರಾಜ್ಯಾಧ್ಯಕ್ಷರ ಹುದ್ದೆಯಿಂದ ಅಮಾನತುಗೊಳಿಸಲು ಆಗ್ರಹಿಸಿ ಹಾಸನ ಜನಪರ ಒಕ್ಕೂಟದ ಸಂಘಸಂಸ್ಥೆಗಳು ಇದೇ ತಿಂಗಳ ೨೮ನೇ ತಾರೀಖು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಜನಪದ ವಿದ್ವಾಂಸ ಮೇಟಿಕರೆ ಹಿರಿಯಣ್ಣ ಮತ್ತು ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜಿಲ್ಲಾ ಅಧ್ಯಕ್ಷರು ಕೂಡ ಜನರಿಂದ ಆಯ್ಕೆಯಾದವರು ಎಂಬ ಕನಿಷ್ಠ ಪ್ರಜ್ಞೆ ಇಲ್ಲದೇ ತಮ್ಮನ್ನು ಪ್ರಶ್ನೆ ಮಾಡುವ ಜಿಲ್ಲಾ ಅಧ್ಯಕ್ಷರಿಗೆ ನೋಟಿಸ್ ನೀಡುವ ಕೆಲಸ ಮಾಡಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಕೂರಿಸಿಕೊಂಡು ತಮಗೆ ಇಷ್ಟ ಬಂದಂತೆ ಪರಿಷತ್ತನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿದೆ ಎಂದು ದೂರು ದಾಖಲಾಗಿದೆ. ಅದೂ ಅಲ್ಲದೇ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಗೆ ಬರಬೇಕಾದ ಹಣವನ್ನು ಕೊಡದೇ ದ್ವೇಷದ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ ಎಂದು ದೂರಿದರು. ಮಹೇಶ್ ಜೋಷಿಯವರು ಈ ಹಿಂದೆ ದೂರದರ್ಶನದಲ್ಲಿ ತಮ್ಮ ಸಹೋದ್ಯೋಗಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಒಬ್ಬ ಅಪರಾಧಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಕುಳಿತಿರುವುದು ಕನ್ನಡಿಗರ ದುರಂತವೇ ಸರಿ. ಏಕಾಏಕಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿಗೆ ಮುಂದಾಗಿದ್ದಾರೆ. ಯಾರ ಮಾತನ್ನೂ ಕೇಳದ ದುರಹಂಕಾರಿ ವರ್ತನೆಯ ಮಹೇಶ್ ಜೋಷಿಯವರು ಸರ್ವಾಧಿಕಾರಿ ವ್ಯಕ್ತಿತ್ವ ಉಳ್ಳವರು ಎಂಬುದನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಇಂತಹವರು ಬೈಲಾ ತಿದ್ದುಪಡಿ ಮಾಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಹಾಸನ ಜನಪರ ಒಕ್ಕೂಟದ ಸಂಘಸಂಸ್ಥೆಗಳು ಇದೇ ತಿಂಗಳ ೨೮ನೇ ತಾರೀಖು ಪ್ರತಿಭಟನೆ ನಡೆಸಲಾಗುವುದು. ಹಣಕಾಸಿನ ಅವ್ಯವಹಾರ ಆರೋಪ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಹಾಗೂ ಪರಿಷತ್ತಿನ ಸದಸ್ಯರ ಜೊತೆಗೆ ಘನತೆಯಿಂದ ನಡೆದುಕೊಳ್ಳದ ಸರ್ವಾಧಿಕಾರಿ ಧೋರಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಹೇಶ್ ಜೋಷಿಯವರನ್ನು ಅಮಾನತ್ತಿನಲ್ಲಿಟ್ಟು ರಾಜ್ಯ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಹಾಗು ಇತರೆ ಬೇಡಿಕೆಗಳನ್ನು ಮುಂದಿಡಲು ಕನ್ನಡ ಭಾಷೆಯ, ಸಾಹಿತ್ಯಪರ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಚಲಂ ಹಾಡ್ಲಹಳ್ಳಿ, ಜಾನಪದ ವಿದ್ವಾಂಸ ಡಾ. ಹಂಪನಹಳ್ಳಿ ತಿಮ್ಮಗೌಡ, ಸಿ.ಐ.ಟಿ.ಯು. ಜಿಲ್ಲಾಧ್ಯಕ್ಷ ಧರ್ಮೇಶ್, ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ಹರೀಶ್ ಇತರರು ಉಪಸ್ಥಿತರಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ