ಕನ್ನಡಪ್ರಭಾರ್ತೆ ಚಿತ್ರದುರ್ಗಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ. ಚಂದ್ರಶೇಖರ್ ರವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಜಾತ್ಯಾತೀತ ಜನತಾದಳದ ಕಾರ್ಯಕರ್ತರು ಮಂಗಳವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಜಯಣ್ಣ, ಲೋಕಾಯುಕ್ತ ಎಡಿಜಿಪಿ ಎಂ. ಚಂದ್ರಶೇಖರ್ ಕರ್ನಾಟಕ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತೀಯ ಪೊಲೀಸ್ ಅಧಿಕಾರಿಯಾಗಿದ್ದು, ಮೂಲತಃ ಹಿಮಾಚಲ ಪ್ರದೇಶದ ಐಪಿಎಸ್ ಕೇಡರ್ ಆಗಿದ್ದಾರೆ. ಪತ್ನಿಯ ಅನಾರೋಗ್ಯ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ರಾಜಕೀಯ ಪ್ರಭಾವವನ್ನು ಬೀರಿ ಕರ್ನಾಟಕ ರಾಜ್ಯಕ್ಕೆ ವರ್ಗಾವಣೆಗೊಂಡು ಕರ್ನಾಟಕ ಐಪಿಎಸ್ ಕೇಡರ್ ನಲ್ಲಿ ವಿಲೀನಗೊಂಡಿದ್ದಾರೆಂದು ಆರೋಪಿಸಿದರು.
ಜೆಡಿಎಸ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್ ಮಾತನಾಡಿ, ವಿಜಯ ಟಾಟಾ, ಅವರ ವಿರುದ್ಧ ಸುಮಾರು 500 ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಉದಾಸೀನ ತೋರಿದ್ದಾರೆ. ಅನೇಕ ಪ್ರಕರಣಗಳಲ್ಲಿ ತನ್ನ ಅಧಿಕಾರ ದರ್ಪದಿಂದ ಡಿವೈಎಸ್‍ಪಿ, ಪಿಎಸ್ಐ ಗಳ ಮೂಲಕ ಸುಳ್ಳು ಪ್ರಕರಣ ದಾಖಲಿಸಿ ಹಣ ಲಪಾಟಿಯಿಸಿದ್ದಾರೆ ಎಂದು ಆರೋಪಿಸಿದರು.ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕ ಸಚಿವ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಲೋಕಾಯುಕ್ತ ಕಚೇರಿಯಲ್ಲಿ ತನಿಖೆಗೆ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ರಾಜ್ಯಪಾಲರು ಮಾಹಿತಿ ಮತ್ತು ವಿಚಾರಣೆಯನ್ನು ಬಯಸಿರುವ ವಿಷಯ ತಿಳಿಸಿದ್ದಾರೆ. ರಾಜ್ಯ ಸರ್ಕಾರದಿಂದ ವಿವರಣೆ ಕೇಳಿದ ಹಿನ್ನಲೆ ಗಮನದಲ್ಲಿಟ್ಟುಕೊಂಡು ಈ ಮಾಹಿತಿ ರಾಜ ಭವನದಿಂದ ಸೋರಿಕೆಯಾಗಿದೆ ಎಂದರು.
ಎಡಿಜಿಪಿ ಚಂದ್ರಶೇಖರ್ ಸರ್ಕಾರದ ಕೆಲಸ ದುರುಪಯೋಗ ಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಸಂಸ್ಥೆಗೆ ಅವಮಾನ ಮಾಡಿರುವ ಭ್ರಷ್ಟ ಅಧಿಕಾರಿಯನ್ನು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ, ಜಿಲ್ಲಾ ಉಪಾಧ್ಯಕ್ಷ ಮಠದ ಹಟ್ಟಿ ವೀರಣ್ಣ, ತಾಲೂಕು ಅಧ್ಯಕ್ಷ ಸಣ್ಣ ತಿಮ್ಮಣ್ಣ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ, ಕಾರ್ಯಾಧ್ಯಕ್ಷ ಜಿ.ಬಿ. ಶೇಖರ್, ನಗರಸಭೆ ಸದಸ್ಯರಾದ ದೀಪು, ನಸರುಲ್ಲಾ ವಿದ್ಯಾರ್ಥಿ ಘಟಕ ಜಿಲ್ಲಾಧ್ಯಕ್ಷ ಅಬು ವೀರಭದ್ರಣ್ಣ, ಕರಿಬಸಪ್ಪ, ಮಂಜಣ್ಣ, ರುದ್ರಣ್ಣ, ಪ್ರತಿಭಟನೆ ನೇತೃತ್ವ ವಹಿಸಿದ್ದರು.