ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದ್ಯುತ್‌ ಇಲಾಖೆಯನ್ನು ಟಾಟಾ ಪವರ್‌ ಕಂಪನಿಗೆ ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಪರವಾನಗಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘ ಪ್ರತಿಭಟನೆ ನಡೆಸಿತು.

ಸೋಮವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಮೇಶ್‌, ಟಾಟಾ ಪವರ್‌ ಕಂಪನಿಗೆ ಖಾಸಗೀಕರಣ ಮಾಡುವುದರಿಂದ ಸರ್ಕಾರ ಉಚಿತ ಯೋಜನೆಗಳಿಗೆ ಧಕ್ಕೆಯಾಗಲಿದೆ. ವಿದ್ಯುತ್‌ ಗುತ್ತಿಗೆದಾರರು ತೊಂದರೆಗೆ ಸಿಲುಕಲಿದ್ದಾರೆ. ಖಾಸಗಿ ಕಂಪನಿಗಳ ಲಾಭದ ಆಸೆಯಿಂದಾಗಿ ವಿದ್ಯುತ್‌ ದರಗಳು ಹೆಚ್ಚಳವಾಗಿ ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗೆ ಹೊರೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಖಾಸಗಿ ಸಂಸ್ಥೆಗಳು ಹೆಚ್ಚು ಆದಾಯ ತರುವ ನಗರ ಪ್ರದೇಶಗಳಿಗೆ ಆದ್ಯತೆ ನೀಡುವುದರಿಂದ ಗ್ರಾಮೀಣ ಭಾಗದ ಸೇವೆಗಳು ಕುಸಿಯುವ ಸಾಧ್ಯತೆಯಿದೆ. ವಿದ್ಯುತ್‌ ಇಲಾಖೆಯ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಹಾಗೂ ಸಾವಿರಾರು ಪರವಾನಗಿ ಪಡೆದ ಗುತ್ತಿಗೆದಾರರ ಬದುಕಿನ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್‌ ಇಲಾಖೆಯನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಸರ್ಕಾರದಿಂದ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಮಾಪನ ವರದಿ ಕಡ್ಡಾಯವಾಗಿದೆ. ಇತರೆ ರಾಜ್ಯಗಳಲ್ಲಿ ಇದು ಕಡ್ಡಾಯವಲ್ಲ. ಆದ್ದರಿಂದ ನಮ್ಮ ರಾಜ್ಯದಲ್ಲಿ ಬೇರೆ ರಾಜ್ಯಗಳ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಸರ್ಕಾರದಲ್ಲಿ 150 ಕಿ.ವ್ಯಾಟ್‌ವರೆಗೂ ಗುತ್ತಿಗೆದಾರರು ಬೇಡ ಎಂಬ ಪ್ತಸ್ತಾವನೆಯನ್ನು ಕೈಬಿಡಬೇಕು. ಯಾವುದೇ ವಿದ್ಯುತ್‌ ಕಾಮಗಾರಿಗಳನ್ನು ನಡೆಸಬೇಕಾದರೆ ಸರ್ಕಾರದಿಂದ ಪರವಾನಗಿ ಪಡೆದ ವಿದ್ಯುತ್‌ ಗುತ್ತಿಗೆದಾರರಿಂದಲೇ ನಿರ್ವಹಿಸಬೇಕು ಎಂಬ ಆದೇಶವನ್ನು ಮುಂದುವರೆಸಬೇಕು. ವಿದ್ಯುತ್‌ ಗುತ್ತಿಗೆದಾರರೇ ಸಮಾಪನ ವರದಿ ಸಲ್ಲಿಸುವುದನ್ನು ಮುಂದುವರೆಸಬೇಕು. ಗುತ್ತಿಗೆದಾರರು ಮತ್ತು ಅವರ ಕುಟುಂಬದ ಅಳಿವು ಉಳಿವಿನ ಪ್ರಶ್ನೆಯಾಗಿರುವ ಖಾಸಗೀಕರಣವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.