ಕನ್ನಡಪ್ರಭ ವಾರ್ತೆ ಬೀಳಗಿ

ಕೃಷ್ಣಾ ಮೇಲ್ದಂಡೆ ಯೋಜನೆಯ ಸಂತ್ರಸ್ಥರಿಗೆ ಪ್ರತಿ ಎಕರೆಗೆ ₹ 30-40 ಲಕ್ಷ ನಿಗದಿಪಡಿಸಿದ್ದು, ಆದರೆ ಬಿಡದಿ ಟೌನ ಪ್ಲಾನಗೆ ಪ್ರತಿ ಎಕರೆಗೆ ₹ 2.30 ಕೋಟಿ ರಿಂದ ₹ 4 ಕೋಟಿ ವರೆಗೆ ಪರಿಹಾರ ನೀಡುತ್ತಿದ್ದು, ದಕ್ಷಿಣ ಕರ್ನಾಟಕದ ರೈತರಿಗೆ ಕಣ್ಣಿಗೆ ಬೆಣ್ಣೆ ಮತ್ತು ಉತ್ತರ ಕರ್ನಾಟಕ ರೈತರಿಗೆ ಕಣ್ಣಿಗೆ ಸುಣ್ಣ ಈ ರೀತಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸಿಎಂ ಡಿ.ಕೆ.ಶಿವಕುಮಾರರವರ ಕ್ರಮ ಸರಿ ಅಲ್ಲ. ರಾಜ್ಯದ ಎಲ್ಲ ರೈತರಿಗೆ ಏಕರೂಪ ಪರಿಹಾರ ಒದಗಿಸಬೇಕು ಎಂದು ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಸರ್ಕಾರಕ್ಕೆ ಆಗ್ರಹಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಜಿಲ್ಲಾ ಹಾಗೂ ತಾಲೂಕು ಘಟಕದ ಸಹಯೋದಲ್ಲಿ ರೈತರು ಪ್ರತಿಭಟನೆ ನಡೆಸಿ ರಾಜ್ಯದಲ್ಲಿ ಸರ್ಕಾರದ ವಿವಿಧ ಯೋಜನೆಗಳಿಗೆ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಏಕರೂಪ ಪರಿಹಾರ ನೀಡಬೇಕು ಮತ್ತು ರೈತರ ವಿವಿಧ ಬೇಡಿಕೆಗಳನ್ನು ಈಡೆರಿಸಲು ಆಗ್ರಹಿಸಿ ತಾಲೂಕು ಆಡಳಿತದ ಶಿರಸ್ತೇದಾರ ಐ.ಎಸ್.ಗಡ್ಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ರೈತರ ಬಿತ್ತನೆಗೆ ಉತ್ತಮ ಬೀಜ, ಸಮರ್ಪಕ ರಸಗೊಬ್ಬರ, ಸಮರ್ಪಕ ವಿದ್ಯುತ, ಸಮರ್ಪಕ ನೀರು ಒದಗಿಸಬೇಕು. ರೈತರಿಗೆ ಉತ್ತಮ ರಸಗೊಬ್ಬರ ಪೂರೈಸಬೇಕು.

ಕಳೆದ ಕೆಲವು ದಿನಗಳ ಹಿಂದೆ ಮಳೆ ಗಾಳಿಗೆ ಅಪಾರ ಪ್ರಮಾಣದ ತೋಟಗಾರಿಕೆ, ಕೃಷಿ, ಬೆಳೆಗಳು ಮತ್ತು ಆಸ್ತಿ-ಪಾಸ್ತಿ ಹಾಗೂ ದನ-ಕರಗಳು ಹಾನಿಯಾಗಿದ್ದು, ತಕ್ಷಣ ಪರಿಹಾರ ಒದಗಿಸಬೇಕು. ಅತಿವೃಷ್ಟಿ ಅನಾವೃಷ್ಟಿಯಿಂದ ಹಾನಿಯಾದ ಬೆಳೆಗಳಿಗೆ ಸರಿಯಾದ ವಿಮಾಕ್ಲೇಮ್ ನೀಡಿರುವುದಿಲ್ಲ ಅದನ್ನು ಮರು ಪರಿಶೀಲಿಸಬೇಕು. ಈ ಎಲ್ಲ ಬೇಡಿಕೆಳನ್ನು ಶೀಘ್ರದಲ್ಲಿ ಈಡೇರಿಸಬೇಕು ಇಲ್ಲದ್ದಿದ್ದಲ್ಲಿ ಭಾರತೀಯ ಕೀಸಾನ ಸಂಘ ಕರ್ನಾಟಕ ಪ್ರದೇಶ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ನೇತೃತ್ವ ವಹಿಸಿದ್ದರು. ತಾಲೂಕಾಧ್ಯಕ್ಷ ಮಲ್ಲಪ್ಪ ಗಾಣಗೇರ, ಜಿಲ್ಲಾ ಕಾರ್ಯದರ್ಶಿ ಕುಮಾರ ಯಡಹಳ್ಳಿ, ತಾಲೂಕು ಕಾರ್ಯದರ್ಶಿ ಗುರಪ್ಪ ಅನಗವಾಡಿ, ರಮೇಶ ಸಾರವಾಡ, ಗುರುನಾಥ ಹಿರೇಮಠ, ಗುರು ಕಾಖಂಡಕಿ, ಹನುಮಂತ ಬೀಳಂಡಿ, ಎಚ್. ಟಿ. ಮೊಖಾಶಿ, ವೆಂಕಟೇಶ ಸಂಶಿ ಇದ್ದರು.


ಕೃಷ್ಣ, ಘಟಪ್ರಭೆ, ಮಲಪ್ರಭೆ ನದಿಯಲ್ಲಿ ನೀರು ಖಾಲಿ ಆಗಿರುವುದರಿಂದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗಿದ್ದು, ಸಂಬಂಧಪಟ್ಟ ನೀರಾವರಿ ಇಲಾಖೆಯವರು ಪ್ರತಿ ನದಿಗೆ 2 ಟಿ.ಎಂ.ಸಿ ನೀರನ್ನು ಹರಿಸಬೇಕು. ಬರಗಾಲ ಆವರಿಸುವುದರಿಂದ ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳು ನಾಟದೆ ಇರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದು ಅವರಿಗೆ ಪರಿಹಾರ ಒದಗಿಸಬೇಕು. ಪಂಪಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಪಡೆಯಲು ಹೆಸ್ಕಾಂದವರು ಲಕ್ಷಾಂತರ ಹಣ ಪಡೆಯುತ್ತಿದ್ದು, ಇದರಿಂದಾಗಿ ರೈತರಿಗೆ ಆರ್ಥಿಕ ಹೊರೆಯಾಗಿದ್ದು, ಹಿಂದಿನ ಸರ್ಕಾರದ ನಿಯಮಾವಳಿಗಳನ್ನೆ ಮುಂದುವರೆಸಿಕೊಂಡು ಹೋಗಬೇಕು.

-ವಿರುಪಾಕ್ಷಯ್ಯ ಹಿರೇಮಠ ಜಿಲ್ಲಾಧ್ಯಕ್ಷರು ಭಾರತೀಯ ಕಿಸಾನ್ ಸಂಘ.ಬಾಗಲಕೋಟೆ