ಕನ್ನಡಪ್ರಭ ವಾರ್ತೆ ವಿಜಯಪುರ

ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಅತ್ಯಂತ ಫಲವತ್ತಾದ ಕೃಷಿಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುತ್ತಿರುವ ಹಾಗೂ ಮುಂದಿನ ತಿಂಗಳು ಬೃಹತ ಪ್ರಮಾಣದಲ್ಲಿ ಭೂಸ್ವಾಧೀನ ವಿಸ್ತರಿಸಲು ಹೊರಟಿರುವ ರಾಜ್ಯ ಸರ್ಕಾರ ತನ್ನ ರೈತ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ ಜನತಾದಳದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯ ಬಡ ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್‌ ಸರ್ಕಾರ ಹೊರಡಿಸಿರುವ ಅಂತಿಮ ಗೆಜೆಟ್ ಅಧಿಸೂಚನೆಯು ಸಂಪೂರ್ಣ ರೈತವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯಾಗಿದೆ. ಪ್ರಸ್ತುತ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿದ್ದು, ಇದರ ಹಿಂದೆ ಬೃಹತ್ ರಿಯಲ್ ಎಸ್ಟೇಟ್‌ ದಂಧೆ ಅಡಗಿದೆ. ಹಾಗಾಗಿ ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ಫಲವತ್ತಾದ ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡಿಸಿರುವ ಈ ಕರಾಳ ಅಂತಿಮ ಅಧಿಸೂಚನೆಯನ್ನು ತಕ್ಷಣವೇ ರದ್ದುಗೊಳಿಸಬೇಕು. 7,500ಕ್ಕೂ ಹೆಚ್ಚು ಎಕರೆ ಭೂಸ್ವಾಧೀನದ ಪ್ರಕ್ರಿಯೆಯನ್ನು ಆರಂಭದಲ್ಲೇ ಕೈಬಿಡಬೇಕು. ಈ ಕೂಡಲೇ ಜಿಲ್ಲಾಧಿಕಾರಿಗಳು ಈ ವಿಷಯದ ಗಾಂಭೀರ್ಯತೆ ಅರಿತು, ನಮ್ಮ ತೀವ್ರ ಪ್ರತಿರೋಧದ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ, ರಾಜು ಹಿಪ್ಪರಗಿ, ದಿಲಾವರ ಖಾಜಿ, ಹುಸೇನ ಬಾಗಾಯತ, ಎಸ್.ಎಸ್.ಖಾದ್ರಿ ಇನಾಮದಾರ, ಸಂಜು ಹಿರೇಮಠ, ವೀರಮ್ಮ ಚನ್ನಗಾಂವಿಶೆಟ್ಟಿ, ಮರೆಪ್ಪ ಗಿರಣಿವಡ್ಡರ, ಕೌಸರ ಶೇಖ, ಬಿ.ಬಿ.ಪಾಟೀಲ ಮುರಾಳ, ಪ್ರಕಾಂತ ಕಿಣಗಿ, ಪೀರಪಾಶಾ ಗಚ್ಚಿಮಹಲ, ಸಂಜು, ಮನೋಜ ಬಿರಾದಾರ ಹಾಗೂ ಇತರರು ಇದ್ದರು.