ಕನ್ನಡಪ್ರಭ ವಾರ್ತೆ ವಿಜಯಪುರ

ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರದಲ್ಲಿ ನಡೆದಿದ್ದ ನಿರಾಳೆ ಕುಟುಂಬದ ಐವರು ಹಾಗೂ ಮತ್ತೋರ್ವ ಸೇರಿ ಒಟ್ಟು 6 ಜನರ ಭೀಕರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಕಾಲಿಗೆ ಗುಂಡು ಹಾರಿಸಿ ಬಂಧಿರುವ ಘಟನೆ ಸೋಮವಾರ ಬೆಳಗ್ಗೆ ನಗರದ ಹೊರವಲಯದ ಇಟ್ಟಂಗಿಹಾಳ ಬಳಿ ಜರುಗಿದೆ.

ಪ್ರಕರಣದಲ್ಲಿ ಭಾಗಿಯಾಗಿದ್ದ ಕಲಬುರಗಿ ಜಿಲ್ಲೆ ಅಪಝಲಪುರ ತಾಲೂಕಿನ ಬೆಳ್ಳುಂಡಗಿಯ ಮುಖ್ಯ ಆರೋಪಿ ಮಹೇಶ ತಳವಾರ ಎಂಬಾತನ ಮೇಲೆ ಫೈರಿಂಗ್ ನಡೆದಿದೆ. ಆತನ ಬಲಗಾಲಿಗೆ ಗುಂಡು ಹಾರಿಸಿ ಚಡಚಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಹೇಶ ತಳವಾರನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಕಲ್ಲುಗಳನ್ನು ಎಸೆದು ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಯರಿಗೂ ಸಹ ಗಾಯಗಳಾಗಿದ್ದು, ಚಡಚಣ ಠಾಣೆ ಪಿಎಸ್‌ಐ ಪರಶುರಾಮ ಮನಗೂಳಿ ಆರೋಪಿ ಮಹೇಶನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.ಗುಂಡೇಟಿನಿಂದ ಗಾಯಗೊಂಡ ಆರೋಪಿ ಮಹೇಶ ಹಾಗೂ ಇಬ್ಬರು ಗಾಯಾಳು ಪೊಲೀಸ್ ಕಾನ್ಸಟೇಬಲ್‌ಗಳಾದ ಶೇಖರ ಪವಾರ ಹಾಗೂ ವಿಜಯಕುಮಾರ ಬನಸೋಡೆಗೆ ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಇದುವರೆಗೂ ಪ್ರಕರಣದಲ್ಲಿ 38 ಜನರ ಬಂಧನವಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ.ಕೋಟ್..ಗೋವಿಂದಪುರದ ಹತ್ಯಾಕಾಂಡದ ಆರೋಪಿಗಳ ಬಂಧನಕ್ಕಾಗಿ ರಚಿಸಿದ್ದ ವಿಶೇಷ ತನಿಖಾ ತಂಡ ಖಚಿತ ಮಾಹಿತಿ ಮೇರೆಗೆ ಆರೋಪಿ ಮಹೇಶ ತಳವಾರನನ್ನು ಬಂಧಿಸಲು ಇಟ್ಟಂಗಿಹಾಳಕ್ಕೆ ತೆರಳಿದ್ದಾಗ, ಆತ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ. ಹೀಗಾಗಿ, ಮೊದಲಿಗೆ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಎಚ್ಚರಿಸಿದರೂ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ನಮ್ಮ ಅಧಿಕಾರಿ ಆತನ ಬಲಗಾಲಿಗೆ ಹುಂಡು ಹಾರಿಸಿ ಬಂಧಿಸಿದ್ದಾರೆ. ಘಟನೆಯಲ್ಲಿ ನಮ್ಮ ಇಬ್ಬರು ಪೊಲೀಸರಿಗೂ ಗಾಯಗಳಾಗಿದ್ದು, ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ಆರೋಪಿ ಮಹೇಶನ ಮೇಲೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. 6 ಜನರ ಕೊಲೆ ಪ್ರಕರಣದಲ್ಲಿ ಇದುವರೆಗೂ 38 ಜನ ಆರೋಪಿಗಳ ಬಂಧನವಾಗಿದ್ದು, ಇನ್ನು ತನಿಖೆ ನಡೆಸಲಾಗುತ್ತಿದೆ.-ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ.ಬಾಕ್ಸ್‌...ಏನಿದು ಹತ್ಯಾಕಾಂಡ ಪ್ರಕರಣ..?2026 ಮೇ 29 ರಂದು ಚಡಚಣದ ನಿರಾಳೆ ಕುಟುಂಬದ 5 ಜನರು ಹಾಗೂ ಇವರೊಂದಿಗೆ ಗೋವಿಂದಪುರಕ್ಕೆ ತೆರಳಿದ್ದವ ಸೇರಿ ಒಟ್ಟು 6 ಜನರನ್ನು ಕಣ್ಣಿಗೆ ಖಾರದಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ಡಬಲ್‌ ಬ್ಯಾರಲ್‌ ಗನ್‌ನಿಂದ ಗುಂಡು ಹಾರಿಸಿ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಭೀಕರವಾಗಿ ಹತ್ಯೆಗೈಯ್ಯಲಾಗಿತ್ತು. ಘಟನೆಯಲ್ಲಿ ನಿರಾಳೆ ಕುಟುಂಬದ ದುಂಡಪ್ಪ ನಿರಾಳೆ, ಶಿವಪುತ್ರ ನಿರಾಳೆ, ಚಂದ್ರಕಾಂತ ನಿರಾಳೆ, ರಾಹುಲ ನಿರಾಳೆ, ಸಮರ್ಥ ನಿರಾಳೆ ಹಾಗೂ ಇವರ ಜೊತೆಗೆ ಹೋಗಿದ್ದ ಶಬ್ಬೀರ್‌ ಅತ್ತಾರ ಎಂಬುವರು ಕೊಲೆಯಾಗಿದ್ದರು.

ಗೋವಿಂದಪುರದಲ್ಲಿದ್ದ ತೇಲಿ ಕುಟುಂಬಕ್ಕೆ ಸೇರಿದ್ದ 25 ಎಕರೆ ಜಮೀನನ್ನು ನಿರಾಳೆ ಕುಟುಂಬ ಖರೀದಿಸಿತ್ತು. ಆದರೆ, ಇದಕ್ಕೆ ಇದೇ ಊರಿನ ತಳವಾರ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿ, ವ್ಯಾಜ್ಯದಲ್ಲಿರುವ ಜಮೀನು ಖರೀದಿಸದಂತೆ ಕ್ಯಾತೆ ತೆಗೆದು ಅಂದು 6 ಜನರನ್ನು ಕೊಲೆ ಮಾಡಿದ್ದರು. ಹತ್ಯಾಕಾಂಡ ನಡೆಸಲು ಗೋವಿಂದಪುರದ ತಳವಾರ ಕುಟುಂಬದ ತಮ್ಮ ಸಂಬಂಧಿಕರಿಂದ ಅಪಝಲಪುರ ತಾಲೂಕಿನ ಬೆಳ್ಳುಂಡಗಿಯ ಮಹೇಶ ತಳವಾರ ಹಾಗೂ ಆತನ ತಂಡದವರು ಸುಪಾರಿ ಪಡೆದಿದ್ದರು ಎನ್ನಲಾಗಿದೆ. ಅಲ್ಲದೇ, 6 ಜನರ ಸಾಮೂಹಿಕ ಹತ್ಯೆಗೆ ಹುಡುಗರನ್ನು ಇತನೇ ಸೇರಿಸಿದ್ದ ಎನ್ನಲಾಗಿದೆ. ಕೊಲೆ ನಡೆದ ಬಳಿಕ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಮಹೇಶ ತಳವಾರ ಇಟ್ಟಂಗಿಹಾಳ ಬಳಿ ಇರುವ ಕುರಿತು ತನಿಖಾ ತಂಡಕ್ಕೆ ತಿಳಿದಿತ್ತು. ಈ ಹಿನ್ನಲೆಯಲ್ಲಿ ಪತ್ತೆ ಹಚ್ಚಿ ಸೋಮವಾರ ಬೆಳಗ್ಗೆ ಬಂಧಿಸಲು ತೆರಳಿತ್ತು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ತಿರುಗಿ ಬಿದ್ದಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಲಾಗಿದೆ.