ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಟ್ರಾಫಿಕ್ ದಟ್ಟಣೆ ಸಮಸ್ಯೆಗೆ ಧೀರ್ಘಕಾಲದ ಪರಿಹಾರಕ್ಕಾಗಿ ಸುರಂಗ ರಸ್ತೆಯ ಜೊತೆಗೆ 150 ಕಿ.ಮೀ ಉದ್ದದ ಎತ್ತರಿಸಿದ ರಸ್ತೆ (ಎಲಿವೇಟೆಡ್ ರೋಡ್) ನಿರ್ಮಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಬಿ ಸ್ಮೈಲ್ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರದಿಂದ ದಕ್ಷಿಣ ಭಾಗವನ್ನು ಸಂಪರ್ಕಿಸುವ 16.7 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಇದು ಸಂಕೀರ್ಣ ಹಾಗೂ ಮಹತ್ವದ ಯೋಜನೆಯಾಗಿದೆ ಎಂದರು.ಪೂರ್ವ ಭಾಗದಿಂದ ಪಶ್ಚಿಮ ಭಾಗವನ್ನು ಸಂಪರ್ಕಿಸಲು ಹಳೇ ಮದ್ರಾಸ್ ರಸ್ತೆಯಿಂದ ಮೈಸೂರು ರಸ್ತೆಯವರೆಗೆ 22 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಮುಂದಿನ ಹಂತದಲ್ಲಿ ಟೆಂಡರ್ ಕರೆಯಲಾಗುತ್ತದೆ ಎಂದು ಸಚಿವರು ತಿಳಿಸಿದರು.

150 ಕಿ.ಮೀ. ಎಲಿವೇಟೆಡ್ ಕಾರಿಡಾರ್: ತಜ್ಞರ ಸಲಹೆ ಮೇರೆಗೆ 150 ಕಿ.ಮೀ. ಉದ್ದದ ಎಲಿವೇಟೆಡ್ ಕಾರಿಡಾರ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಇದರಲ್ಲಿ 75 ಕಿ.ಮೀ. ಉದ್ದದ ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲ ರೀತಿಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.ಬಾಕ್ಸ್...ಸುರಂಗ ಪ್ರವೇಶ, ನಿರ್ಗಮನ ವ್ಯವಸ್ಥಿತವಾಗಿರಲಿ


ಸುರಂಗ ಮಾರ್ಗ ಹಾಗೂ ಎತ್ತರಿಸಿದ ರಸ್ತೆ ನಿರ್ಮಾಣವಾದ ನಂತರ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್‌ಗಳಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ರಸ್ತೆ ಜಾಲವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ಸೂಕ್ತ ಪರಿಹಾರ ಕ್ರಮಗಳನ್ನು ರೂಪಿಸಬೇಕು. ವೇಗವಾಗಿ ಸಂಚರಿಸುವ ವಾಹನಗಳು ಪ್ರವೇಶ ಮತ್ತು ನಿರ್ಗಮನ ತಾಣಗಳಲ್ಲಿ ಸಿಲುಕುವ ಪ್ರಮೇಯ ತಪ್ಪಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.-ಕೋಟ್‌-

ಸುರಂಗ ರಸ್ತೆ ಹಾಗೂ ಎತ್ತರಿಸಿದ ರಸ್ತೆ ಯೋಜನೆಗಳಲ್ಲಿ ಖಾಸಗಿಯವರು ಬಂಡವಾಳ ಹೂಡುತ್ತಾರೆ. ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಲಾಗುತ್ತದೆ. ಯೋಜನೆ ಮುಗಿದ ಬಳಿಕ ಖಾಸಗಿಯವರು ಟೋಲ್‌ ಮೂಲಕ ಬಂಡವಾಳ ಹಿಂಪಡೆಯುತ್ತಾರೆ.

-ಕೃಷ್ಣ ಬೈರೇಗೌಡ, ಬೆಂಗಳೂರು ನಗರಾಭಿವೃದ್ಧಿ ಸಚಿವ