ಬೆಂಗಳೂರು : ಮಾರ್ಚ್‌ 2028ರ ವೇಳಗೆ ನಮ್ಮ ಮೆಟ್ರೋ ಜಾಲವು ಒಟ್ಟು 175 ಕಿ.ಮೀಗೆ ವಿಸ್ತರಣೆಯಾಗಲಿದ್ದು ಇದರಿಂದ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಶುಕ್ರವಾರ ಬಿಎಂಆರ್‌ಸಿಎಲ್‌ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರಸ್ತುತ ನಗರದಲ್ಲಿ 96 ಕಿ.ಮೀ ಮೆಟ್ರೋ ಜಾಲ ಕಾರ್ಯಾಚರಣೆಯಲ್ಲಿದೆ. ಸದ್ಯ ಪ್ರಗತಿಯಲ್ಲಿರುವ ಪಿಂಕ್‌ ಲೈನ್‌ ಮತ್ತು ಬ್ಲೂ ಲೈನ್‌ ಕಾರಿಡಾರ್‌ಗಳು ಸಂಪೂರ್ಣವಾಗಿ ಮುಕ್ತಾಯಗೊಂಡರೆ, ಮೆಟ್ರೋ ಜಾಲ ಒಟ್ಟು 175 ಕಿ.ಮೀಗೆ ವಿಸ್ತಾರಗೊಳ್ಳಲಿದೆ ಎಂದರು.

ಪಿಂಕ್‌ಲೈನ್‌ ಆ.15ಕ್ಕೆ ಮುಕ್ತ:

ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5ಕಿಮೀ ಎತ್ತರಿಸಿದ ‘ಗುಲಾಬಿ ಮಾರ್ಗ’ (ಪಿಂಕ್‌ ಲೈನ್‌) ಜೂನ್‌ನಲ್ಲೇ ಮುಗಿಯಬೇಕಿತ್ತು. ಇದನ್ನು ಆ.15ರೊಳಗೆ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಾವರೆಕೆರೆಯಿಂದ ನಾಗವಾರದವರೆಗಿನ 13.5 ಕಿಮೀ ಸುರಂಗ ಮಾರ್ಗದಲ್ಲಿ ನಿಲ್ದಾಣಗಳ ಕಾಮಗಾರಿ ಮುಗಿದಿದೆ. ಟ್ರ್ಯಾಕ್ ಹಾಗೂ ಸಿಗ್ನಲಿಂಗ್ ಕೆಲಸ ನಡೆಯುತ್ತಿದೆ. ಈ ವಿಭಾಗವನ್ನು 2027ರ ಮಾರ್ಚ್‌ಗೆ ತೆರೆಯಲು ಬಿಎಂಆರ್‌ಸಿಎಲ್ ಸಮಯ ಕೇಳಿದೆ, (ಡಿಸೆಂಬರ್‌ಗೆ ಡೆಡ್‌ಲೈನ್ ನಿಗದಿಯಾಗಿತ್ತು. ) ಎಂದು ತಿಳಿಸಿದರು. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಕಾಳೇನ ಅಗ್ರಹಾರ- ನಾಗವಾರ ನಡುವಿನ ಗುಲಾಬಿ ಮಾರ್ಗ (21.25 ಕಿಮೀ) ಮತ್ತು ನೀಲಿ ಮಾರ್ಗ ಕೆಆರ್‌ಪುರಂ-ಸಿಲ್ಕ್ ಬೋರ್ಡ್ (19.75ಕಿಮೀ) 2 ‘ಎ’, ಹಾಗೂ ಸಿಲ್ಕ್ ಬೋರ್ಡ್-ವಿಮಾನ ನಿಲ್ದಾಣ ಮಾರ್ಗ 2‘ಬಿ’ ಮಾರ್ಗದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ್ದೇವೆ. ನಗರದಲ್ಲಿ ಮೆಟ್ರೊ ಕಾಮಗಾರಿ ನಿರೀಕ್ಷೆಯ ವೇಗದಲ್ಲಿ ಆಗದಿದ್ದರೆ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲ್ಲ ಎಂದರು.


ಪ್ರಾಯೋಗಿಕ ಸಂಚಾರ:

‘ನೀಲಿ 2‘ಎ’ ಮಾರ್ಗ’ದಲ್ಲಿ 3 ನಿಲ್ದಾಣಗಳ ನಿರ್ಮಾಣ ವಿಳಂಬವಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಕೆ.ಆರ್.ಪುರ-ಮಾರತ್ತಹಳ್ಳಿವರೆಗೆ ಹಾಗೂ ಮಾರತ್ತಹಳ್ಳಿಯಿಂದ ಎಚ್‌ಎಸ್‌ಆರ್‌ವರೆಗೆ ರೈಲುಗಳ ಪ್ರಾಯೋಗಿಕ ಸಂಚಾರ ನಡೆಸಲು ಸೂಚಿಸಲಾಗಿದೆ. ಇನ್ನು, ಕೆ.ಆರ್.ಪುರದಿಂದ ಹೆಬ್ಬಾಳದವರೆಗಿನ ಕಾಮಗಾರಿ ನಡೆಸಲು ಸಾಕಷ್ಟು ಸವಾಲುಗಳಿವೆ. ಹೀಗಾಗಿ ಈ ಕಾಮಗಾರಿ 2027ರ ಡಿಸೆಂಬರ್‌ಗೆ ಮುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಡಬಲ್‌ಡೆಕ್ಕರ್‌ಗೆ ಆಕ್ಷೇಪವಿಲ್ಲ:ಜೆ.ಪಿ ನಗರ-ಕೆಂಪಾಪುರ ಹಾಗೂ ಹೊಸಹಳ್ಳಿ-ಕಡಬಗೆರೆವರೆಗಿನ 3ನೇ ಹಂತದ ಮೆಟ್ರೋಗೆ ಒಪ್ಪಿಗೆ ನೀಡುವ ವಿಚಾರ ಕೇಂದ್ರದ ಅಂಗಳದಲ್ಲಿದೆ. ಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೂಡ ದೆಹಲಿಗೆ ತೆರಳಿದ್ದಾಗ ಕೇಂದ್ರ ಸಚಿವರೊಂದಿಗೆ ಮಾತನಾಡಿ ಅನುಮೋದನೆ ನೀಡುವಂತೆ ಕೋರಿದ್ದಾರೆ. ಡಬಲ್‌ ಡೆಕ್ಕರ್‌ಗೆ ಕೇಂದ್ರ ಆಕ್ಷೇಪಿಸಿಲ್ಲ. ಬದಲಾಗಿ ಕೇಂದ್ರದ ಸ್ವಾಯುತ್ತ ಸಂಸ್ಥೆಯಾದ ರೈಟ್ಸ್‌ನಿಂದ ತಾಂತ್ರಿಕ ಹಾಗೂ ಆರ್ಥಿಕ ಸಾಧ್ಯತೆ ವರದಿಯ ಅಧ್ಯಯನ ಮಾಡಿಸಿ ಕೊಡುವಂತೆ ಕೇಳಿದ್ದರು. ಅದರಂತೆ 4 ತಿಂಗಳಿಂದ ಅಧ್ಯಯನ ನಡೆದಿದ್ದು, 20 ದಿನಗಳಲ್ಲಿ ವರದಿ ನೀಡಲಿದ್ದಾರೆ. ಇದನ್ನು ಕೇಂದ್ರಕ್ಕೆ ಸಲ್ಲಿಸಲಿದ್ದೇವೆ ಎಂದರು.‘3ಎ ಹಂತದ ಸರ್ಜಾಪುರ - ಹೆಬ್ಬಾಳ ಸಂಪರ್ಕಿಸುವ ಯೋಜನೆ ಪ್ರಸ್ತಾಪಕ್ಕೆ ಈಗಾಗಲೇ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರ ಇದರ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿ, ಮುಂದಿನ ಪ್ರಕ್ರಿಯೆ ನಡೆಸಲಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್‌ ಇದ್ದರು.