ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸೆಂಟ್ರಲ್‌ ಸಿಲ್ಕ್‌ಬೋರ್ಡ್‌ನಿಂದ ಕೆಂಪೇಗೌಡ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಹು ನಿರೀಕ್ಷೆಯ ನಮ್ಮ ಮೆಟ್ರೋ 58.19 ಕಿ.ಮೀ ಉದ್ದದ ‘ನೀಲಿ ಮಾರ್ಗ’ದಲ್ಲಿ ಸಂಚರಿಸುವ ಮೊದಲ ರೈಲು ಸಿದ್ಧವಾಗಿ ಡಿಪೋ ತಲುಪಿದೆ. ಆದರೆ, ಹಳಿ ಅಳವಡಿಸುವ ಕಾರ್ಯವೇ ಇನ್ನೂ ಮುಗಿದಿಲ್ಲ.

ನಗರದ ತಿಪ್ಪಸಂದ್ರದಲ್ಲಿನ ಬಿಇಎಂಎಲ್ ಪ್ಲಾಂಟ್‌ನಲ್ಲಿ ನಿರ್ಮಾಣಗೊಂಡಿರುವ 6 ಕೋಚ್‌ಗಳ ಮೊದಲ ರೈಲು ಸೆಟ್ ಬಿಎಂಆರ್‌ಸಿಎಲ್‌ನ ಬೈಯಪ್ಪನಹಳ್ಳಿ ಡಿಪೋವನ್ನು ತಲುಪಿದೆ. ಒಂದೆರಡು ವಾರಗಳಲ್ಲಿ ಮತ್ತೊಂದು ರೈಲು ಕೂಡ ಆಗಮಿಸಲಿದ್ದು, ಡಿಪೋದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಏರ್‌ಪೋರ್ಟ್ ಮಾರ್ಗದಲ್ಲಿ ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ 6 ಕೋಚ್‌ಗಳ ಪೈಕಿ 2 ಕೋಚ್‌ಗಳಲ್ಲಿ ಲಗೇಜ್ ರ್‍ಯಾಕ್ ಅಳವಡಿಸಲಾಗಿದೆ. ‘ನಿಗದಿತ ವೇಳೆಯ ಪ್ರಕಾರವೇ ನೀಲಿ ಮಾರ್ಗದ ರೈಲುಗಳು ಪೂರೈಕೆ ಮಾಡಲಾಗುತ್ತಿದೆ’ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರ, ನಾಗವಾರ, ಹೆಬ್ಬಾಳ ಮಾರ್ಗವಾಗಿ ರಿಂಗ್ ರಸ್ತೆಯಲ್ಲಿ ನಗರದ ಪ್ರಮುಖ ಐಟಿ-ಬಿಟಿ ಪ್ರದೇಶಗಳ ಮೂಲಕ ನೀಲಿ ಮಾರ್ಗ ಹಾದು ಹೋಗುತ್ತದೆ. ನೀಲಿ ಮಾರ್ಗದಲ್ಲಿ ಮೊದಲ ಹಂತದಲ್ಲಿ ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರವರೆಗೆ 13 ರೈಲು ನಿಲ್ದಾಣಗಳ ನಡುವಿನ ರೈಲು ಸಂಚಾರ ಈ ವರ್ಷಾಂತ್ಯಕ್ಕೆ ಆರಂಭಿಸುವ ಗುರಿ ಹೊಂದಲಾಗಿದೆ. ಆದರೆ, ಸಾಕಷ್ಟು ಕಾಮಗಾರಿ ಬಾಕಿ ಇರುವುದರಿಂದ ನಿಗದಿತ ವೇಳೆಗೆ ರೈಲು ಸಂಚಾರ ಆರಂಭವಾಗುವುದಿಲ್ಲ ಎಂದು ತಿಳಿದು ಬಂದಿದೆ.

ಪರೀಕ್ಷೆಗೆ ತಿಂಗಳುಗಳು ಬೇಕು:


19.75 ಕಿ.ಮೀ ಉದ್ದದ ಸಿಲ್ಕ್‌ಬೋರ್ಡ್ ಮತ್ತು ಕೆ.ಆರ್.ಪುರ ನಡುವಿನ ಮಾರ್ಗದಲ್ಲಿ ಹಳಿ ಅಳವಡಿಕೆಗಾಗಿ ಟ್ರ್ಯಾಕ್ ಪ್ಲಿಂತ್ ಕಾಸ್ಟಿಂಗ್ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಇನ್ನು ಕೆ.ಆರ್.ಪುರದಿಂದ ಏರ್‌ಪೋರ್ಟ್‌ವರೆಗಿನ ಮಾರ್ಗದಲ್ಲಿ 38.44 ಕಿ.ಮೀ ಉದ್ದದ ಮಾರ್ಗದಲ್ಲಿ ಏಪ್ರಿಲ್ ಅಂತ್ಯದವರೆಗೆ ಟ್ರ್ಯಾಕ್ ಪ್ಲಿಂತ್ ಕಾಸ್ಟಿಂಗ್ ಕಾಮಗಾರಿ ಕ್ರಮವಾಗಿ ಶೇ.18ರಷ್ಟು ಪೂರ್ಣಗೊಂಡಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡ ಬಳಿಕವೇ ರೈಲುಗಳನ್ನು ಹಳಿಗೆ ಇಳಿಸಿ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗುತ್ತದೆ. ಅದಕ್ಕೆ ಹಲವು ತಿಂಗಳುಗಳೇ ಬೇಕಾಗುತ್ತದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಮುಂದಿನ ವರ್ಷ ರೈಲು ಸಂಚಾರ

ರೈಲು ನಿಲ್ದಾಣಗಳ ನಿರ್ಮಾಣ, ಹಳಿ ಅಳವಡಿಕೆ, ಎಲೆಕ್ಟ್ರಿಕಲ್ ಕಾಮಗಾರಿ ಸೇರಿದಂತೆ ಸಾಕಷ್ಟು ಕಾಮಗಾರಿ ಬಾಕಿ ಇರುವ ಜೊತೆಗೆ ರೈಲುಗಳ ಪರೀಕ್ಷಾರ್ಥ ಸಂಚಾರವೂ ಆಗಬೇಕಿರುವ ಕಾರಣ ನೀಲಿ ಮಾರ್ಗದಲ್ಲಿ ನಿಗದಿತ ಅವಧಿಯಲ್ಲಿ ರೈಲು ಸಂಚಾರ ಆರಂಭವಾಗುವುದಿಲ್ಲ. ಸಿಲ್ಕ್‌ಬೋರ್ಡ್‌ನಿಂದ ಕೆ.ಆರ್.ಪುರ ವರೆಗಿನ ಮಾರ್ಗದಲ್ಲಿ ಮುಂದಿನ ವರ್ಷದಿಂದ ಸಂಚಾರ ಆರಂಭವಾಗಬಹುದು ಎಂದು ಹೇಳಲಾಗಿದೆ.

ಹಳದಿ ಮಾರ್ಗದಲ್ಲಿ ರೈಲು

ಇರಲಿಲ್ಲ ಹಳಿ ಸಿದ್ಧವಾಗಿತ್ತು!

ಆರ್.ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹಳದಿ ಮಾರ್ಗ ಸಂಪೂರ್ಣ ಸಿದ್ಧವಾಗಿ ಹಲವು ತಿಂಗಳುಗಳೇ ಕಳೆದರೂ ರೈಲುಗಳು ಬಂದಿರಲಿಲ್ಲ. ಈಗಲು ಕೇವಲ 10 ರೈಲುಗಳು ಮಾತ್ರ ಸಂಚರಿಸುತ್ತವೆ. ಇನ್ನೂ 5 ರೈಲುಗಳು ಬರಬೇಕಾಗಿದೆ. ಹಳದಿ ಮಾರ್ಗಕ್ಕೆ ಬಳಸಲಾಗದು!ಹಳದಿ ಮಾರ್ಗದಲ್ಲಿ ರೈಲುಗಳ ಕೊರತೆ ಇದೆ. ಆದರೆ, ನೀಲಿ ಮಾರ್ಗದಲ್ಲಿ ಹಳಿ ಸಿದ್ಧವಾಗುವ ಮುಂಚೆಯೇ ರೈಲು ಬಂದಿದೆ. ಹೀಗಾಗಿ, ನೀಲಿ ಮಾರ್ಗದ ರೈಲನ್ನು ಹಳದಿ ಮಾರ್ಗದಲ್ಲಿ ಸಂಚಾರಕ್ಕೆ ಬಿಡಬಾರದೇಕೆ? ಎಂದು ಕೆಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ. ಆದರೆ, ಎರಡು ಮಾರ್ಗದಲ್ಲಿ ರೈಲು ಪೂರೈಕೆ ಮಾಡಿರುವ ಕಂಪನಿಗಳು ಹಾಗೂ ತಂತ್ರಜ್ಞಾನ ಭಿನ್ನವಾಗಿದೆ. ಅಲ್ಲದೇ, ರೈಲು ಮಾರ್ಗಗಳು ಕೂಡ ಬೇರೆ ಬೇರೆ ಆಗಿರುವುದರಿಂದ ನೀಲಿ ಮಾರ್ಗದ ರೈಲನ್ನು ಹಳದಿ ಮಾರ್ಗಕ್ಕೆ ಬಳಸಲಾಗದು ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ನೀಲಿ ಮಾರ್ಗದ ಪ್ರಮುಖಾಂಶಗಳು

- ಮಾರ್ಗದ ಉದ್ದ - 58 ಕಿ.ಮೀ

- ಮಾರ್ಗದಲ್ಲಿ ಸಂಚರಿಸುವ ಒಟ್ಟು ರೈಲುಗಳು- 37

- ಒಟ್ಟು ನಿಲ್ದಾಣಗಳು - 30

- 2026ರ ಅಂತ್ಯಕ್ಕೆ ಸಿಲ್ಕ್‌ಬೋರ್ಡ್‌ನಿಂದ ಕೆಂಪಾಪುರ ಸಂಚಾರ ಕಾರ್ಯಾರಂಭ ಗುರಿ.

- 2027ರ ಅಂತ್ಯದೊಳಗೆ ಕೆ.ಆರ್.ಪುರದಿಂದ ಕೆಂಪೇಗೌಡ ಏರ್ಪೋರ್ಟ್ ಕಾರ್ಯಾರಂಭ ಗುರಿ.