ಬೆಂಗಳೂರು : ರಾಜ್ಯ ಸರ್ಕಾರದಲ್ಲಿ ಖಾತೆ ಕ್ಯಾತೆ ಮುಂದುವರಿದಿದ್ದು, ಸಚಿವ ರಾಮಲಿಂಗಾರೆಡ್ಡಿ ನಂತರ ಇದೀಗ ಕೃಷ್ಣ ಬೈರೇಗೌಡ ಅವರು ತಮ್ಮ ಖಾತೆ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬಿಡಿಎ-ಬಿಎಂಆರ್‌ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹಂಚಿಕೆ ಮಾಡಿದ್ದಕ್ಕೆ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಬಿಡಿಎ ಮತ್ತು ಬಿಎಂಆರ್‌ಡಿಎ ಇಲ್ಲದೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಅರ್ಧ ಖಾತೆಯಾಗಲಿದೆ. ಕೆಲಸ ಮಾಡಬೇಕೆಂದರೆ ಪೂರ್ಣಪ್ರಮಾಣದಲ್ಲಿ ಖಾತೆ ನೀಡಿ. ಇಲ್ಲದಿದ್ದರೆ ರಾಮಲಿಂಗಾರೆಡ್ಡಿ ಅವರಿಗೇ ಬೆಂಗಳೂರು ನಗರಾಭಿವೃದ್ಧಿ ಖಾತೆ ವಹಿಸಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರ ಮುಂದೆ ತಿಳಿಸಿದ್ದಾರೆ ಎನ್ನಲಾಗಿದೆ.

ಅರ್ಧ ಖಾತೆ ಕುರಿತು ಮಾಧ್ಯಮಗಳ ಮುಂದೆಯೂ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಕೃಷ್ಣ ಬೈರೇಗೌಡ, ಬಿಡಿಎ-ಬಿಎಂಆರ್‌ಡಿಎ ಹೊರತುಪಡಿಸಿ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಲಾಗಿದೆ. ಮುಖ್ಯಮಂತ್ರಿ ಅವರು ಈ ರೀತಿ ಏಕೆ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ಸಂಪೂರ್ಣ ಬೆಂಗಳೂರಿನ ಮೇಲೆ ಹಿಡಿತವಿಲ್ಲದಿದ್ದರೆ ಪರಿಣಾಮಕಾರಿಯಾಗಿ ಕೆಲಸ ಮಾಡಲಾಗದು, ನಿಗದಿತ ಗುರಿ ಮುಟ್ಟಲಾಗದು ಮತ್ತು ಫಲಿತಾಂಶ ನೀಡಲಾಗದು. ವಿಭಜಿತ ಜವಾಬ್ದಾರಿಯಿಂದ ಸರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.


ಕೆಲಸ ಆರಂಭಿಸದ ಕೃಷ್ಣ ಬೈರೇಗೌಡ:

ಬೆಂಗಳೂರು ನಗರಾಭಿವೃದ್ಧಿ ಖಾತೆಯಲ್ಲಾಗಿರುವ ವಿಭಜನೆಯಿಂದ ಬೇಸರಗೊಂಡಿರುವ ಕೃಷ್ಣ ಬೈರೇಗೌಡ ಖಾತೆ ಹಂಚಿಕೆಯಾಗಿ ಐದು ದಿನಗಳಾಗುತ್ತಿದ್ದರೂ ಈವರೆಗೆ ಖಾತೆ ವಹಿಸಿಕೊಂಡು ಕೆಲಸ ಆರಂಭಿಸಿಲ್ಲ. ಜತೆಗೆ ಜಿಬಿಎ ಸೇರಿ ತಮಗೆ ವಹಿಸಿರುವ ಬೆಂಗಳೂರು ನಗರಾಭಿವೃದ್ಧಿ ವ್ಯಾಪ್ತಿಯಲ್ಲಿನ ಇಲಾಖೆಗಳ ಯಾವುದೇ ಅಧಿಕಾರಿಗಳನ್ನೂ ಕೃಷ್ಣ ಬೈರೇಗೌಡ ಸಂಪರ್ಕಿಸಿಲ್ಲ. ತಮ್ಮ ಖಾತೆ ವಿಚಾರದಲ್ಲಿನ ಗೊಂದಲ ನಿವಾರಣೆಯಾಗುವವರೆಗೆ ಅಧಿಕಾರ ಸ್ವೀಕರಿಸದಿರಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

- ಬೈರೇಗೌಡಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ

- ಆದ್ರೆ ಬಿಡಿಎ, ಬಿಎಂಆರ್‌ಡಿಎ ಹೊರಗಿಟ್ಟು ಹಂಚಿಕೆ

- ಪೂರ್ಣ ಖಾತೆ ನೀಡದ ನಿರ್ಧಾರಕ್ಕೆ ಅಸಮಾಧಾನ

- ಕೊಡುವುದಿದ್ದರೆ ನನಗೆ ಪೂರ್ಣ ಖಾತೆಯನ್ನೇ ನೀಡಿ

- ಇಲ್ಲದಿದ್ರೆ ರಾಮಲಿಂಗಾ ರೆಡ್ಡಿಗೇ ಈ ಖಾತೆ ಕೊಡಿ

- ಡಿಕೆಶಿ, ಸುರ್ಜೇವಾಲ ಎದುರು ಬೈರೇಗೌಡ ಹೇಳಿಕೆ

- ಅರ್ಧ ಖಾತೆಯಲ್ಲಿ ಕೆಲಸ ಮಾಡೋದು ಕಷ್ಟ: ಸಚಿವ